ಜೆಎನ್‌ಯು ವಿವಾದ:ಕನ್ಹಯಾ ಸೇರಿದಂತೆ ಎಂಟು ವಿದ್ಯಾರ್ಥಿಗಳು ತರಗತಿಯಿಂದ ಡಿಬಾರ್

Update: 2016-02-14 13:46 GMT

ಹೊಸದಿಲ್ಲಿ,ಫೆ.14: ಸಂಸತ್ ದಾಳಿಯ ದೋಷಿ ಅಫ್ಝಲ್ ಗುರು ಸ್ತುತಿಗೆ ಸಂಬಂಧಿಸಿದಂತೆ ಜವಾಹರಲಾಲ ನೆಹರು ವಿವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದರೆ ಇತ್ತ ವಿವಿಯ ಉನ್ನತ ಮಟ್ಟದ ವಿಚಾರಣಾ ಸಮಿತಿಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯಾ ಕುಮಾರ ಮತ್ತು ಕಾರ್ಯದರ್ಶಿ ರಾಮ ನಾಗಾ ಸೇರಿದಂತೆ ಎಂಟು ವಿದ್ಯಾರ್ಥಿಗಳು ಫೆ.9ರಂದು ವಿವಿ ಕ್ಯಾಂಪಸ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ‘‘ಆಕ್ಷೇಪಾರ್ಹ ಘೋಷಣೆಗಳನ್ನು’’ಕೂಗುತ್ತಿದ್ದುದು ಮೇಲ್ನೋಟಕ್ಕೆ ರುಜುವಾತಾಗಿದೆ ಎಂದು ನಿರ್ಧರಿಸಿದೆ ಮತ್ತು ಈ ಎಂಟೂ ವಿದ್ಯಾರ್ಥಿಗಳು ತರಗತಿಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ತನ್ಮಧ್ಯೆ ಜೆಎನ್‌ಯು ವಿದ್ಯಾರ್ಥಿ ಸಂಘವು ಸೋಮವಾರ ಮುಷ್ಕರಕ್ಕೆ ಕರೆ ನೀಡಿದ್ದು ಕನ್ಹಯಾರನ್ನು ಬೇಷರತ್ ಬಿಡುಗಡೆಗೊಳಿಸುವವರೆಗೆ ಮುಷ್ಕರವನ್ನು ಮುಂದುವರಿಸುವುದಾಗಿ ಹೇಳಿದೆ. ಸಮಿತಿಯ ನಿರ್ಧಾರವು ವಿದ್ಯಾರ್ಥಿ ಸಂಘದ ನಿಲುವನ್ನು ಇನ್ನಷ್ಟು ಕಠೋರಗೊಳಿಸುವ ಸಾಧ್ಯತೆಯಿದೆ.


  ಮೂವರು ಸದಸ್ಯರ ಸಮಿತಿಯು ಶುಕ್ರವಾರ ಸಂಜೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಎಂಟು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಿಂದ ಡಿಬಾರ್ ಮಾಡುವಂತೆ ಶಿಫಾರಸು ಮಾಡಿದೆ ಎಂದು ವಿವಿಯ ಕುಲಸಚಿವ ಭೂಪಿಂದರ್ ಝುಟ್ಶಿ ಅವರು ಪ್ರಕಟಿಸಿದರು. ಈ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಿಂದ ಡಿಬಾರ್ ಮಾಡಲಾಗಿದೆಯಾದರೂ ಅವರು ವಿಚಾರಣೆಗೆ ಹಾಜರಾಗಬೇಕಿರುವುದರಿಂದ ಹಾಸ್ಟೆಲ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿಲ್ಲ ಎಂದರು.


 ಪೊಲೀಸರು ಕ್ಯಾಂಪಸ್‌ನಿಂದ ನಿರ್ಗಮಿಸಬೇಕೆಂಬ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಗ್ರಹವನ್ನು ತಳ್ಳಿ ಹಾಕಿದ ಅವರು,ವಿವಿ ಆವರಣದಲ್ಲಿ ಪೊಲೀಸರ ಉಪಸ್ಥಿತಿಯಿಲ್ಲ ಎಂದು ಹೇಳಿದರು. ಪೊಲೀಸರು ವಿವಿ ಅಧಿಕಾರಿಗಳ ಅನುಮತಿ ಪಡೆದುಕೊಂಡೇ ಕನ್ಹಯಾ ಕುಮಾರ ಬಂಧನಕ್ಕಾಗಿ ಬ್ರಹ್ಮಪುತ್ರಾ ಹೆಸರಿನ ಒಂದು ಹಾಸ್ಟೆಲ್‌ಗೆ ಮಾತ್ರ ಹೋಗಿದ್ದರು ಎಂದರು. ವಿವಿಯ ಕುಲಪತಿಗಳು ಶುಕ್ರವಾರ ವಿವಿಧ ಕೇಂದ್ರಗಳ ಡೀನ್‌ಗಳು ಮತ್ತು ಮುಖ್ಯಸ್ಥರನು ್ನಭೇಟಿಯಾಗಿ ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಝುಟ್ಶಿ ತಿಳಿಸಿದರು. ರವಿವಾರ ಬೆಳಿಗ್ಗೆ ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಕುಲಾಧಿಪತಿ ಕೆ.ಕಸ್ತೂರಿ ರಂಗನ್ ಅವರು ಅಧಿಕಾರಿಗಳು,ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕಂಡು ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News