×
Ad

ನನ್ನ ಮಗ ಭಯೋತ್ಪಾದಕ ಎಂದು ಕರೆಯಬೇಡಿ: ಕನ್ಹಯ್ಯಾ ತಾಯಿ ಮನವಿ

Update: 2016-02-14 20:11 IST

ಪಾಟ್ನ, ಫೆ.14 ದಯವಿಟ್ಟು ನನ್ನ ಮಗನನ್ನು ಭಯೋತ್ಪಾದಕ ಎಂದು ಪರಿಗಣಿಸಬೇಡಿ ಎಂದು ದೇಶದ್ರೋಹ ಆರೋಪದ ಮೇಲೆ ಬಂಧಿತರಾಗಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ಅವರ ತಾಯಿ ಮನವಿ ಮಾಡಿದ್ದಾರೆ.


ಬಿಹಾರದ ಬೆಗುಸರಾಜ್ ಜಿಲ್ಲೆಯಲ್ಲಿ ವಾಸವಿರುವ ಇವರು ಪಕ್ಕದ ಮನೆಯಲ್ಲಿ ಟಿವಿ ಚಾನಲ್‌ಗಳನ್ನು ವೀಕ್ಷಿಸಿದ ಬಳಿಕ ಈ ಮನವಿ ಮಾಡಿಕೊಂಡಿದ್ದಾರೆ. ಕನ್ಹಯ್ಯನನ್ನು ಬಂಧಿಸಲಾಗಿದೆ ಎಂಬ ವಿಷಯ ತಿಳಿದ ಬಳಿಕ ನಾವು ಟಿವಿ ನೋಡುತ್ತಿದ್ದೇವೆ. ಪೊಲೀಸರು ಆತನಿಗೆ ಬಹಳಷ್ಟು ಹೊಡೆಯುವುದಿಲ್ಲ ಎಂಬ ನಿರೀಕ್ಷೆ ನಮ್ಮದು. ದೇಶಕ್ಕೆ ಬಿಡಿ; ಆತ ಎಂದೂ ತಂದೆ- ತಾಯಿಗೆ ಕೂಡಾ ಎದುರಾಡಿದವನಲ್ಲ. ನನ್ನ ಮಗನನ್ನು ಉಗ್ರಗಾಮಿ ಎಂದು ಮಾತ್ರ ಕರೆಯಬೇಡಿ. ಆಗ ಖಂಡಿತವಾಗಿಯೂ ಅಂಥವನಲ್ಲ ಎಂದು ಮೀನಾದೇವಿ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.


ಮಾಸಿಕ 3,500 ರೂಪಾಯಿ ಆದಾಯ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯಾಗಿರುವ ಮೀನಾದೇವಿಯವರ ಹಿರಿಯ ಮಗ ಮಣಿಕಂಠ ಮಾತ್ರ ಇಡೀ ಕುಟುಂಬದ ಜೀವನಾಧಾರ. 65 ವರ್ಷದ ಪತಿ ಪಾರ್ಶ್ವವಾಯುಪೀಡಿತರಾಗಿ ಏಳು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಹಿಂದುತ್ವ ನೀತಿಯನ್ನು ವಿರೋಧಿಸಿದ್ದಕ್ಕಾಗಿ ಮಗನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ತಂದೆ ಜೈಶಂಕರ್ ಸಿಂಗ್ ಆಪಾದಿಸಿದ್ದಾರೆ.


ಬಿಜೆಪಿ ಸರಕಾರದ ಹಲವು ಆಂದೋಲನಗಳಲ್ಲಿ ಮಗ ಸಕ್ರಿಯನಾಗಿದ್ದ. ಅದು ಫೆಲೋಶಿಪ್ ವಿಚಾರದಿಂದ ಹಿಡಿದು ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿರಬಹುದು. ಹಿಂದುತ್ವ ರಾಜಕೀಯ ವಿರೋಧಿಸಿದ್ದಕ್ಕಾಗಿ ಆತನನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಹೇಳಿದರು. ಆತ ದೇಶವಿರೋಧಿಯಾಗಲು ಸಾಧ್ಯವೇ ಇಲ್ಲ. ರಾಷ್ಟ್ರವಿರೋಧಿ ಸಿದ್ಧಾಂತಕ್ಕೆ ಆತ ಮಾರುಹೋಗುವ ಪ್ರಶ್ನೆಯೇ ಇಲ್ಲ. ಆತನ ವಯಸ್ಸಿನ ಇತರ ಎಲ್ಲ ಯುವಕರಂತೆ ಆತ ಕೂಡಾ ರಾಷ್ಟ್ರೀಯವಾದಿ ಯುವಕ. ಭಾರತಮಾತೆಗೆ ಅಗೌರವ ತೋರಲು ಸಾಧ್ಯವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಸೆಪ್ಟಂಬರ್‌ನಲ್ಲಿ ಕನ್ಹಯ್ಯ ಜೆಎನ್‌ಯು ವಿದ್ಯಾರ್ಥಿ ಸಂಘ ಚುನಾವಣೆಯಲ್ಲಿ 1,029 ಮತ ಪಡೆದು ಭರ್ಜರಿ ಜಯ ಗಳಿಸಿದ್ದ. ಸಿಪಿಐ ವಿದ್ಯಾರ್ಥಿ ಘಟಕವಾದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್‌ನಿಂದ ಅಧ್ಯಕ್ಷನಾದ ಮೊದಲ ವ್ಯಕ್ತಿ ಆತ. ಇನ್ನೊಬ್ಬ ಸಹೋದರ ಪ್ರಿನ್ಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾನೆ. ಇಡೀ ಕುಟುಂಬ ತಲೆಮಾರುಗಳಿಂದ ಸಿಪಿಐ ಸಿದ್ಧಾಂತ ನಂಬಿಕೊಂಡು ಬಂದಿದೆ ಎಂದು ಅವರು ಹೇಳುತ್ತಾರೆ.


ಕನ್ಹಯ್ಯ ಬಂಧನವನ್ನು ರಾಜಕೀಯಗೊಳಿಸಲಾಗಿದೆ ಎಂದು ಆಪಾದಿಸುವ ಪ್ರಿನ್ಸ್, ರಾಷ್ಟ್ರೀಯ ಚಳವಳಿಯಲ್ಲಿ ಯಾವ ಪಾತ್ರವನ್ನೂ ವಹಿಸಿದ ರಾಷ್ಟ್ರವಿರೋಧಿ ಶಕ್ತಿಗಳು, ನನ್ನ ಸಹೋದರ ಹಾಗೂ ವಿಶ್ವವಿದ್ಯಾನಿಲಯವನ್ನು ರಾಷ್ಟ್ರವಿರೋಧಿ ಎಂದು ಬಣ್ಣಿಸುತ್ತಿದೆ. ಇದು ಕೇವಲ ಆತನಿಗೆ ಸಂಬಂಧಪಟ್ಟ ವಿಚಾರವಾಗಿರದೇ ತೀರಾ ದೊಡ್ಡದು ಎಂದು ಹೇಳಿದರು.ಆರಂಭದಿಂದಲೂ ವಿಶ್ವವಿದ್ಯಾಲಯದಲ್ಲಿ ಜನಪ್ರಿಯ ಮುಖಂಡನಾಗಿದ್ದ ಕನ್ಹಯ್ಯಿ, ಬಂಧನದ ಹಿಂದಿನ ದಿನ ನನಗೆ ರಾಷ್ಟ್ರಪ್ರೇಮಿ ಎಂಬ ಆರೆಸ್ಸೆಸ್ ಪ್ರಮಾಣಪತ್ರ ಬೇಕಿಲ್ಲ ಎಂದು ಹೇಳಿದ್ದ. 2004ರಲ್ಲಿ ಪಾಟ್ನಾದ ವಾಣಿಜ್ಯ ಕಾಲೇಜಿಗೆ ಸೇರುವ ಮುನ್ನ ಕನ್ನಯ್ಯ ಬಿಹಾರದ ಬರೌನಿ ಪ್ರದೇಶದ ಆರ್‌ಕೆಸಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದ. ನಳಂದ ಮುಕ್ತ ವಿವಿ ಪದವಿ ಪಡೆದ ಬಳಿಕ 2011ರಲ್ಲಿ ಎಂಫಿಲ್‌ಗಾಗಿ ಜೆಎನ್‌ಯು ಸೇರಿದ್ದರು. ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನಲ್ಲಿ ಇದೀಗ ಮೂರನೇ ವರ್ಷದ ಪಿಎಚ್‌ಡಿ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News