×
Ad

ಮಂಗಳೂರು : ಕೆಕೆಎಂಎಯಿಂದ ವಿದ್ಯಾರ್ಥಿ ವೇತನ, ಮನೆ ಹಸ್ತಾಂತರ

Update: 2016-02-14 20:48 IST

ಮಂಗಳೂರು, ಫೆ.14: ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಘ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಇಂದು ನಗರದ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ಹಾಗೂ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್‌ನ ಕಾರ್ಯಾಧ್ಯಕ್ಷ ಬಿ.ಎಂ.ಇಕ್ಬಾಲ್, ಕುವೈತ್‌ನಲ್ಲಿ ಕರ್ನಾಟಕ, ಕೇರಳ ರಾಜ್ಯಗಳ ಅನಿವಾಸಿ ಭಾರತೀಯರು ಸೇರಿ ಕಟ್ಟಿದ ಕೆಕೆಎಂಎ ಸಂಸ್ಥೆಯು ಕಳೆದ 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, 14ರಿಂದ 15 ಕೋಟಿ ರೂ.ಗಳಷ್ಟು ಹಣವನ್ನು ಈವರೆಗೆ ಸಮಾಜದ ದುರ್ಬಲರ, ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ವ್ಯಯ ಮಾಡಿದೆ ಎಂದರು.

ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಂಸ್ಥೆಯ ವತಿಯಿಂದ 9 ಡಯಾಲಿಸಿಸ್ (ಕರ್ನಾಟದಲ್ಲಿ 3 ಡಯಾಲಿಸಿಸ್ ಕೇಂದ್ರ) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮರಣ ಹೊಂದಿದ ಸಂಸ್ಥೆಯ ಸದಸ್ಯರಿಗೆ ನೆರವಾಗುವ ನಿಟ್ಟಿನಲ್ಲಿ 8 ಲಕ್ಷ ರೂ. ನೀಡಲಾಗುತ್ತಿದ್ದು, ಈವರೆಗೆ ಮರಣ ಹೊಂದಿದ ಸಂಸ್ಥೆಯ 102 ಸದಸ್ಯರಿಗೆ ತಲಾ 8 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ. ಈ ನೆರವು ಸಂಸ್ಥೆಯ ಪ್ರತಿಯೊಬ್ಬ ಸದಸ್ಯರಿಂದಲೇ ಸಂಗ್ರಹಿಸಿ ನೀಡಲಾಗುತ್ತಿದೆ. ಅಲ್ಲದೆ ಇಂತಹ ಸದಸ್ಯರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಸಂಸ್ಥೆಯ ವತಿಯಿಂದಲೇ ಭರಿಸಲಾಗುತ್ತಿದೆ ಎಂದು ಇಕ್ಬಾಲ್ ಹೇಳಿದರು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಕೆಕೆಎಂಎ ಸಂಸ್ಥೆಯವರ ಸೇವೆಯನ್ನು ಶ್ಲಾಘಿಸಿದರಲ್ಲದೆ, ಮುಸ್ಲಿಮರಿಗೆ ಸರಕಾರದಿಂದ ದೊರೆಯುವ ಸಲವತ್ತುಗಳ ಬಗ್ಗೆ ಮಾಹಿತಿ ನೀಡುವ ಮತ್ತು ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ಒದಗಿಸಿ ಕೊಡುವ ಕಾರ್ಯಗಳು ಕೂಡ ಮುಸ್ಲಿಂ ಸಂಘ ಸಂಸ್ಥೆಗಳಿಗೆ ಆಗಬೇಕಾಗಿದೆ ಎಂದರು.

 ಕಾರ್ಯಕ್ರಮದಲ್ಲಿ 10 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಂಜಿನಿಯರಿಂಗ್ ಕಲಿಯುತ್ತಿರುವ ಮೂವರು ವಿದ್ಯಾರ್ಥಿಗಳಿಗೆ ತಲಾ 15,000 ಹಾಗೂ ಪದವಿ ಕಲಿಯುತ್ತಿರುವ 7 ಮಂದಿ ವಿದ್ಯಾರ್ಥಿಗಳಿಗೆ ತಲಾ 9,000 ರೂ. ವಿತರಿಸಲಾಯಿತು. ಚಾರ್ಮಾಡಿಯಲ್ಲಿರುವ ಯತೀಂ ಕುಟುಂಬವೊಂದನ್ನು ಗುರುತಿಸಿ ಅವರಿಗೆ ಸಂಸ್ಥೆಯ ವತಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮನೆಯ ಕೀಯನ್ನು ಇಂದು ಹಸ್ತಾಂತರಿಸಲಾಯಿತು. ಇದಲ್ಲದೆ, ಮರಣ ಹೊಂದಿದ ಸಂಘದ ಸದಸ್ಯರೊಬ್ಬರ ಕುಟುಂಬಕ್ಕೆ 8 ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಕೆಕೆಎಂಎ ಪೋಷಕರಾದ ಸಗೀರ್ ತ್ರಿಕಾರಿಪುರ, ಕೋಶಾಧಿಕಾರಿ ಅಬೂಬಕರ್ ತುಂಬೆ, ಕರ್ನಾಟಕದ ಕೋ ಆರ್ಡಿನೇಟರ್ ಎಸ್.ಎಂ.ಫಾರೂಕ್, ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್ ಸುಲ್ತಾನ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಟ್ಯಾಲೆಂಟ್ ರೀಸರ್ಚ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಜಂಇಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಕೋಶಾಧಿಕಾರಿ ಇಮ್ತಿಯಾಝ್ ಖತೀಬ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ರಿಝ್ವಾನ್, ಹಿಖ್ಮಾ ಇಂಟರ್ ನ್ಯಾಷನಲ್ ಅಕಾಡೆಮಿಯ ಕೋಶಾಧಿಕಾರಿ ಸಾಜಿದ್ ಎ.ಕೆ., ಎಸ್.ಎಂ.ಬಾಶ, ಬಶೀರ್, ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News