ಭಾರತದ ಪ್ರತಿಕ್ರಿಯೆಗೆ ಪಾಕ್ ಬೇಸರ
ಇಸ್ಲಾಮಾಬಾದ್,ಫೆ.14: ಪಾಕಿಸ್ತಾನಕ್ಕೆ ಎಫ್-16 ಯುದ್ಧವಿಮಾನಗಳನ್ನು ಮಾರಾಟ ಮಾಡುವ ಅಮೆರಿಕದ ನಿರ್ಧಾರಕ್ಕೆ ಭಾರತವು ನೀಡಿರುವ ಪ್ರತಿಕ್ರಿಯೆಯಿಂದ ತನಗೆ ಅಶ್ಚರ್ಯ ಹಾಗೂ ಬೇಸರವಾಗಿದೆಯೆಂದು ಇಸ್ಲಾಮಾಬಾದ್ ರವಿವಾರ ತಿಳಿಸಿದೆ. ಭಾರತವು ರಕ್ಷಣಾ ಸಾಮಗ್ರಿಗಳ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ಅದರ ಶಸ್ತ್ರಾಸ್ತ್ರ ಸಂಗ್ರಹವು ತನಗಿಂತ ತುಂಬಾ ಹೆಚ್ಚಿದೆಯೆಂದು ಅದು ಹೇಳಿದೆ.
ಪಾಕ್‌ಗೆ ಎಫ್-16 ಫೈಟರ್‌ಜೆಟ್‌ಗಳ ಮಾರಾಟದಿಂದ, ಭಯೋತ್ಪಾದನೆಯ ವಿರುದ್ಧ ಸಮರದಲ್ಲಿ, ಉಗ್ರರ ವಿರುದ್ಧ ನಿಖರವಾದ ದಾಳಿಗಳನ್ನು ನಡೆಸುವ ಆ ದೇಶದ ಸಾಮರ್ಥ್ಯವನ್ನು ಹೆಚ್ಚಿಸುವುದೆಂಬ ಒಬಾಮಾ ಸರಕಾರದ ವಾದವನ್ನು ಇಸ್ಲಾಮಾಬಾದ್ ಪುನರುಚ್ಚರಿಸಿದೆ.
ಪಾಕ್‌ಗೆ ಅಣ್ವಸ್ತ್ರ ವಾಹಕ ಸಾಮರ್ಥ್ಯದ ಎಂಟು ಎಫ್-16 ಫೈಟರ್‌ಜೆಟ್‌ಗಳನ್ನು ಮಾರಾಟ ಮಾಡುವ ಒಬಾಮಾ ಸರಕಾರದ ನಿರ್ಧಾರದ ಬಗ್ಗೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಲು ಭಾರತವು ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾರನ್ನು ಕರೆಸಿಕೊಂಡ ಬಳಿಕ ಪಾಕ್ ಈ ಪ್ರತಿಕ್ರಿಯೆ ನೀಡಿದೆ.
ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಶನಿವಾರ ಅಮೆರಿಕ ರಾಯಭಾರಿ ರಿಚರ್ಡ್ ವರ್ಮಾರನ್ನು ದಕ್ಷಿಣ ಬ್ಲಾಕ್‌ನಲ್ಲಿರುವ ತನ್ನ ಕಾರ್ಯಾಲಯಕ್ಕೆ ಕರೆಸಿಕೊಂಡಿದ್ದರು. ಇಬ್ಬರ ನಡುವೆ 45 ನಿಮಿಷಗಳ ಕಾಲ ನಡೆದ ಮಾತುಕತೆಯ ವೇಳೆ ಜೈಶಂಕರ್ ಅವರು ಪಾಕ್‌ಗೆ ಅಮೆರಿಕ ಸೇನಾ ನೆರವು ನೀಡುತ್ತಿರುವ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದರು. ಅಮೆರಿಕವು ಪಾಕ್‌ಗೆ ನೀಡುವ ಸೇನಾನೆರವು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆಯೆಂದು ಅವರು ಆತಂಕ ವ್ಯಕ್ತಪಡಿಸಿದ್ದರು.
ಭಾರತ ಸರಕಾರದ ಪ್ರತಿಕ್ರಿಯೆಯಿಂದ ನನಗೆ ಅಚ್ಚರಿ ಹಾಗೂ ಅಸಮಾಧಾನವಾಗಿದೆ. ಭಾರತದ ಸೇನೆ ಹಾಗೂ ಶಸ್ತ್ರಾಸ್ತ್ರ ಸಂಗ್ರಹವು ನಮಗಿಂತ ತುಂಬಾ ಹೆಚ್ಚಿದೆ ಹಾಗೂ ಅದು ರಕ್ಷಣಾ ಉತ್ಪನ್ನಗಳ ಅತಿ ದೊಡ್ಡ ಆಮದುದಾರನಾಗಿದೆ. -ಪಾಕ್‌ನ ವಿದೇಶಾಂಗ ಕಾರ್ಯಾಲಯ
ಅಮೆರಿಕವು ಪಾಕ್‌ಗೆ ನೀಡುವ ಸೇನಾನೆರವು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ.
-ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ