ಮುಂಬೈ: ಮೇಕ್ ಇನ್ ಇಂಡಿಯಾದಲ್ಲಿ ಭಾರೀ ಅಗ್ನಿ ಅವಘಡ

Update: 2016-02-14 18:42 GMT

ತನಿಖೆಗೆ ಆದೇಶ

ಮುಂಬೈ, ಫೆ.14: ಇಲ್ಲಿ ಆಯೋಜಿಸಲಾಗಿರುವ ‘‘ಮೇಕ್ ಇನ್ ಇಂಡಿಯಾ’’ಸಪ್ತಾಹದ ಅಂಗವಾಗಿ ರವಿವಾರ ರಾತ್ರಿ ಗಿರಗಾಂವ್ ಚೌಪಾಟಿಯಲ್ಲಿ ಸಾಂಸೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.

ಬೆಂಕಿಯಿಂದಾಗಿ ಪ್ರಧಾನವೇದಿಕೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ವೇದಿಕೆಯ ಕೆಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು ಈ ಬೆಂಕಿ ಅವಘಡಕ್ಕೆ ಕಾರಣವಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರವಷ್ಟೇ ಮೇಕ್ ಇನ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಿದ್ದರು.ಘಟನೆ ಸಂಭವಿಸಿದಾಗ ಭಾರೀ ಸಂಖ್ಯೆಯಲ್ಲಿ ಪ್ರತಿನಿಧಿಗಳು, ಹೂಡಿಕೆದಾರರು, ರಾಜಕಾರಣಿಗಳು ಮತ್ತು ಚಲನಚಿತ್ರ ತಾರೆಯರು ಉಪಸ್ಥಿತರಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಎಲ್ಲರನ್ನೂ ತಕ್ಷಣ ಸ್ಥಳದಿಂದ ತೆರವುಗೊಳಿಸಿದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರ ಪತ್ನಿ ಅಮೃತಾ ಫಡ್ನವೀಸ್, ಶೀವಸೇನಾ ವರಿಷ್ಠ ಉದ್ಧವ ಠಾಕ್ರೆ,ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಮತ್ತು ಆಮಿರ್ ಖಾನ್, ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಸೇರಿದಂತೆ ಹಲವಾರು ವಿವಿಐಪಿಗಳು ಸ್ಥಳದಲ್ಲಿದ್ದರು ಎಂದು ಮೂಲಗಳು ತಿಳಿಸಿದವು.

ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಬೆಂಕಿಯನ್ನು ಸಂಪೂರ್ಣವಾಗಿ ಶಮನಗೊಳಿಸಲಾಗಿದೆ ಎಂದು ಫಡ್ನವೀಸ್ ತಿಳಿಸಿದರು. ಕಾರ್ಯಕ್ರಮವನ್ನು ಏರ್ಪಡಿಸುವ ಮುನ್ನ ಅಗ್ನಿ ಸುರಕ್ಷತೆ ಪರಿಶೀಲನೆಯನ್ನು ನಡೆಸಲಾಗಿತ್ತು ಮತ್ತು ಎಲ್ಲ ನಿಗದಿತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬೆಂಕಿಗೆ ಕಾರಣಗಳನ್ನು ತಿಳಿದುಕೊಳ್ಳಲು ಸಮಗ್ರ ವಿಚಾರಣೆಯನ್ನು ನಡೆಸಲಾಗುವುದು ಎಂದರು.

ಅಗ್ನಿಶಮನ ಕಾರ್ಯಾಚರಣೆಗೆ 14 ಅಗ್ನಿಶಾಮಕ ಯಂತ್ರಗಳು ಮತ್ತು 10 ನೀರಿನ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರೂ ವೇದಿಕೆ ಮಾತ್ರ ಸಂಪೂರ್ಣವಾಗಿ ಸುಟ್ಟು ಭಸ್ಮಗೊಂಡಿದೆ.

ಬೆಂಕಿ ಕಾಣಿಸಿಕೊಂಡಾಗ ಸ್ಥಳದಲ್ಲಿದ್ದವರು ಗಾಬರಿಗೊಂಡು ಎಲ್ಲೆಂದರಲ್ಲಿ ಓಡತೊಡಗಿದ್ದರು. ಕೆಲವರು ನೆರವಿಗಾಗಿ ಚೀರಾಡುತ್ತಿದ್ದರು.

ಜಾನಪದ ನೃತ್ಯ ನಡೆಯುತ್ತಿದ್ದಾಗ ವೇದಿಕೆಯ ಅಡಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ವಯಂಸೇವಕರು ಎಚ್ಚರಿಕೆಯನ್ನು ನೀಡಿದ್ದು ಕಲಾವಿದರು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಧಾವಿಸಿ ಅಪಾಯದಿಂದ ಪಾರಾದರು.

.....................


ಪಾರಾದ ನಟ ಆಮಿರ್!

ಬೆಂಕಿಯ ಜ್ವಾಲೆಗಳು ಎಷ್ಟೊಂದು ವೇಗವಾಗಿ ಹಬ್ಬಿತ್ತೆಂದರೆ ಇಡೀ ವೇದಿಕೆ ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು ಎಂದು ನಟ ಆಮಿರ್ ಖಾನ್ ಹೇಳಿದರು.
ನಾನು ನನ್ನ ಮೇಕಪ್ ವ್ಯಾನ್‌ನಲ್ಲಿ ಕಾಯುತ್ತಿದ್ದೆ. ಇನ್ನೊಂದು ಘಂಟೆಯಲ್ಲಿ ನಾನು ಕಾರ್ಯಕ್ರಮ ನೀಡಬೇಕಿತ್ತು. ಬೆಂಕಿ ಹತ್ತಿದೆ ಎಂದು ನನ್ನ ಸಹಾಯಕ ತಿಳಿಸಿದಾಗ ನಾನು ಕೆಳಗಿಳಿದಿದ್ದೆ. ನನ್ನ ಕಣ್ಣೆದುರೇ ಇಡೀ ವೇದಿಕೆ ಹೊತ್ತಿ ಉರಿಯುತ್ತಿತ್ತು ಎಂದ ಆಮಿರ್, ನನಗೇನಾಗಿಲ್ಲ. ಆದರೆ ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದರು. ಅಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಥ ವಾಗಿ ನಿರ್ವಹಿಸಿದರು.
ಕೆಲವೊಮ್ಮೆ ಜನರನ್ನು ತೆರವುಗೊಳಿಸುವಾಗಲೂ ಗಾಯಗಳಾಗುತ್ತವೆ. ಇಲ್ಲಿ ತೆರವು ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಿತು. ಮುಖ್ಯಮಂತ್ರಿ ಫಡ್ನವೀಸ್ ಅವರೇ ಮುಂಚೂಣಿಯಲ್ಲಿದ್ದರು. ಅವರನ್ನು ಅಭಿನಂದಿಸಲೇಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News