ಶಾರುಖ್ ನ ಡರ್ ಪ್ರೇರಿತ ' ರಹಸ್ಯ ಪ್ರೇಮಿ ' ಕೊನೆಗೆ ಮಾವನ ಮನೆ ಸೇರಿದ !

Update: 2016-02-15 07:48 GMT

ಹೊಸದಿಲ್ಲಿ , ಫೆ. 15 : ಮೆಟ್ರೋದಲ್ಲಿ ಮೊದಲ ನೋಟದಲ್ಲೇ ಆಕೆಯ ಮೇಲೆ ಆತನಿಗೆ ಪ್ರೀತಿ ಹುಟ್ಟಿತು. ಒಂದು ವರ್ಷ ಆತ ಪ್ರತಿದಿನ ಬೆಳಗ್ಗಿಂದ ಸಂಜೆಯವರೆಗೆ ಆಕೆಯನ್ನು ಹಿಂಬಾಲಿಸಿದ. ಆಕೆಯ ಬಗ್ಗೆ ಪ್ರತಿಯೊಂದು ಮಾಹಿತಿಯನ್ನೂ ಕಲೆ ಹಾಕಿದ. ಎಲ್ಲಿಯವರೆಗೆಂದರೆ ಆಕೆಯ ಇಷ್ಟದ ಚಿಪ್ಸ್ ಯಾವುದು ಎಂಬುದೂ ಆತನಿಗೆ ಗೊತ್ತು. ಆದರೆ ಇದ್ಯಾವುದೂ ಆಕೆಗೆ ಗೊತ್ತೇ ಇಲ್ಲ ! 

ಇದು ಇತ್ತೀಚಿಗೆ ದಿಲ್ಲಿಯಲ್ಲಿ ವಿಚಿತ್ರ ಅಪಹರಣಕ್ಕೊಳಗಾಗಿ ಬಳಿಕ ಸುರಕ್ಷಿತವಾಗಿ ಮನೆ ಸೇರಿದ ದೀಪ್ತಿ ಸರ್ನಾ ಹಾಗು ಆಕೆಗೇ ಗೊತ್ತಿಲ್ಲದೆ ಆಕೆಯನ್ನು ರಹಸ್ಯವಾಗಿ ಪ್ರೀತಿಸುತ್ತಿದ್ದ ದೇವೆಂದರ್ ಕುಮಾರ್ ರ ದುಸ್ಸಾಹಸದ ಕತೆ. 

" 36 ಗಂಟೆಗಳ ಅಪಹರಣದ ಬಳಿಕ ದೇವೆಂದರ್ ಆಕೆಯನ್ನು ಸುರಕ್ಷಿತವಾಗಿ ನರೇಲ ರೈಲ್ವೆ ನಿಲ್ದಾಣಕ್ಕೆ ತಂದು ಬಿಡುತ್ತಾನೆ. ಯಾಕೆಂದರೆ ಆಕೆಗೆ ತನ್ನ ಮೇಲೆ ಪ್ರೀತಿ ಹುಟ್ಟಲಿ ಎಂಬುದು ಆತನ ಉದ್ದೇಶ. ಆದರೆ ಈಗ ಪೊಲೀಸರ ಪ್ರೀತಿಗೆ ಪಾತ್ರನಾಗಿ ' ಮಾವನ ಮನೆ ' ಸೇರಿದ್ದಾನೆ. 

ಪ್ರತಿದಿನ ದೀಪ್ತಿ ಮನೆಗೆ ಹೋಗುವಾಗ ಇತರ ಪ್ರಯಾಣಿಕರೊಂದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಇದನ್ನು ಗಮನಿಸಿದ್ದ ದೇವೆಂದರ್ ಇಬ್ಬರು ಆಟೋದವರನ್ನು ತನ್ನ ಈ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ತನಗೆ ಆಕೆಯಿಂದ ಹಣದ ಅಪೇಕ್ಷೆ ಇಲ್ಲದಿದ್ದರೂ , ಅವರಿಬ್ಬರ ಬಳಿ " ಆಕೆ ದೊಡ್ಡ ಉದ್ಯಮಿ. ನಿಮಗೆ ಕನಿಷ್ಠ 10-12 ಕೋಟಿ ಕೇಳಬಹುದು " ಎಂದು ಹೇಳಿ ನಂಬಿಸಿದ್ದಾನೆ. 

ಜೂಹಿ ಚಾವ್ಲರನ್ನು ಅವಳಿಗೇ ಗೊತ್ತಿಲ್ಲದಂತೆ ಪ್ರೀತಿಸಿ ಆಕೆಯನ್ನು ಪಡೆಯಲು ಪ್ರಯತ್ನಿಸುವ 1993 ರ ಶಾರುಕ್ ಖಾನ್ ರ ಸೂಪರ್ ಹಿಟ್ ಚಿತ್ರ ಡರ್ ನಿಂದ ದೇವೆಂದರ್  ಪ್ರೇರಣೆ ಪಡೆದಿದ್ದ ಎಂದು ನಂಬಲಾಗಿದೆ. 

" ಆತ ತನ್ನದೇ ಭ್ರಮಾಲೋಕದಲ್ಲಿ ಬದುಕುತ್ತಿದ್ದ " ಎಂದು ಪೋಲಿಸ್ ಅಧಿಕಾರಿ ಹೇಳಿದ್ದಾರೆ. 

" ನನಗೆ ಅವರು ಯಾಕೆ ನನ್ನನ್ನು ಅಪಹರಣ ಮಾಡಿದರು ಎಂದೇ ಗೊತ್ತಾಗಲಿಲ್ಲ. ನನಗೆ ಯಾವ ರೀತಿಯಲ್ಲೂ ತೊಂದರೆ ನೀಡಲಿಲ್ಲ. ನನ್ನನ್ನು ಒಂದು ವರ್ಷ ಆಟ ಹಿಂಬಾಲಿಸಿದ್ದಾನೆ ಎಂದು ನನಗೆ ಗೊತ್ತೇ ಆಗಲಿಲ್ಲ. ಮೆಟ್ರೋದಲ್ಲೂ ನಾನು ಮಹಿಳಾ ಕೋಚ್ ನಲ್ಲೇ ಪ್ರಯಾನಿಸುತ್ತಿದೆ " ಎಂದು ದೀಪ್ತಿ ಹೇಳಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News