ಸುಳ್ಯ : ದುಗ್ಗಲಡ್ಕದಲ್ಲಿ ರಂಜಿಸಿದ ಸುಳ್ಯ ತುಳು ಮಿನದನ - ಸಾಂಸ್ಕೃತಿಕ ವೈಭವ - ಜನಪದ ಆಟಗಳ ಅನಾವರಣ
ಸುಳ್ಯ: ಯುವ ಜನತೆ ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿರುವುದರಿಂದ ಖಂಡಿತವಾಗಿಯೂ ಈ ಭಾಷೆಗೆ ಸಕಲ ಸ್ಥಾನಮಾನಗಳು ದೊರೆಯುವುದರಲ್ಲಿ ಸಂಶಯವಿಲ್ಲ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಶ್ರೀಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ದುಗ್ಗಲಡ್ಕ ಕುರಲ್ ತುಳುಕೂಟ ಮತ್ತು ಕೊಯಿಕುಳಿ ಮಿತ್ರ ಯುವಕ ಮಂಡಲದ ಸಹಕಾರದಲ್ಲಿ ದುಗ್ಗಲಡ್ಕದಲ್ಲಿ ನಡೆದ ಸುಳ್ಯ ತುಳುಮಿನದನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮಾತನಾಡಿ, ತುಳು ಭಾಷೆ ನಶಿಸುತ್ತದೆ ಎಂಬ ಭಯ ಬೇಡ. ಯಾಕೆಂದರೆ ಇತ್ತೀಚಿನ ಕೆಲವು ವರ್ಷಗಳಿಂದ ಈ ಭಾಷೆ ಮೈಕೊಡವಿ ಎದು ನಿಂತಿದೆ. ಮೊಬೈಲ್ ಭಾಷೆಯಿಂದಲೂ ತುಳು ಬೆಳೆದಿದೆ ಎಂದು ಹೇಳಿದರು.
ಗುತ್ತಿಗಾರು ರಬ್ಬರ್ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಲಯನ್ಸ್ ರಾಜ್ಯಪಾಲ ಎಂಬಿ.ಸದಾಶಿವ, ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಕಲ್ಮಡ್ಕ ಸೊಸೈಟಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ಮಿತ್ರ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಎಂ.ಕೆ.ಪುರುಷೋತ್ತಮ ಗೌಡ ಮಾಣಿಬೆಟ್ಟು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಯಕ್ರಮದ ಸಂಚಾಲಕ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ ಸ್ವಾಗತಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಪ್ರಸ್ತಾವನೆಗೈದು ಕುರಲ್ ತುಳು ಕೂಟದ ಕಾರ್ಯದರ್ಶಿ ಶಶಿಕಲಾ ನೀರಬಿದರೆ ವಂದಿಸಿದರು. ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು. ಕುರಲ್ ತುಳುಕೂಟದ ಅಧ್ಯಕ್ಷ ಬಾಲಕೃಷ್ಣ ನಾಯರ್ ನೀರಬಿದರೆ, ಕೋಶಾಧಿಕಾರಿ ಸಿರಿಲ್ ಡಿ ಸೋಜ, ಮಿತ್ರ ಯುವಕ ಮಂಡಲದ ಅಧ್ಯಕ್ಷ ಆನಂದ ನಿರಬಿದರೆ, ಕಾರ್ಯದರ್ಶಿ ರಜೇಶ್ ನಿರಬಿದರೆ, ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆ:
ಬೆಳಿಗ್ಗೆ ಮಿನದನ ಉದ್ಘಾಟಿಸಿದ ಸುಳ್ಯ ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ತುಳು ಭಾಷೆ ಉಳಿದು ಬೆಳೆಯಲು ಭೂತಾರಾಧನೆ, ಜಾನಪದ ಕ್ರೀಡೆಗಳು ಪೂರಕ ಎಂದು ಎಂದು ಹೇಳಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಭೂತಾರಾಧನೆ, ನಾಗಾರಾಧನೆ ತುಳುನಾಡಿನ ಪವಿತ್ರವಾದ ಸಂಸ್ಕೃತಿ ಹಾಗೂ ನಂಬಿಕೆ ಇದನ್ನು ಉಳಿಸಿ ಬೆಳೆಸುವ ಕೆಲಸ ಮುಂದಿನ ಪೀಳಿಗೆಯದಾಗಬೇಕು ಎಂದವರು ಹೇಳಿದರು.
ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚನ ಧರ್ಮಗುರು ವಿನ್ಸೆಂಟ್ ಡಿ ಸೋಜ, ಅರೆಭಾಷೆ ಅಕಾಡೆಮಿ ಸದಸ್ಯ ಮದುವೆಗದ್ದೆ ಬೋಜಪ್ಪ ಗೌಡ, ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ಸುಳ್ಯ ನಗರ ಪಂಚಾಯತ್ ಸದಸ್ಯೆ ಶೀಲಾವತಿ, ಪಿಡಬ್ಲುಡಿ ಗುತ್ತಿಗೆದಾರ ಕೆ.ಎಸ್.ಗೋಪಾಲಕೃಷ್ಣ, ಐವರ್ನಾಡು ಪ್ರೌಢಶಾಲಾ ಶಿಕ್ಷಕ ಸೂಫಿ ಪೆರಾಜೆ ಅತಿಥಿಗಳಾಗಿದ್ದರು. ತುಳುಮಿನದನ ಕಾರ್ಯಕ್ರಮದಲ್ಲಿ ಹಲವು ಜಾನಪದ ಆಟದ ಸ್ಪರ್ಧೆಗಳು ನಡೆದವು. ಕಂಗಿನ ಹಾಳೆಯಲ್ಲಿ ಕುಳಿತು ಎಳೆಯುವುದು, ತೆಂಗಿನ ಕಾಯಿ ಕುಟ್ಟುವುದು, ತೆಂಗಿನ ಕಾಯಿಗೆ ಕಲ್ಲು ಬಿಸಾಡುವುದು, ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆಗಳು ನಡೆದವು.
ಜಾನಕಿ ಬ್ರಹ್ಮಾವರ ರಚನೆಯ ಸುರೇಶ್ ಅತ್ತಾವರ ನಿರ್ದೇಶನದ ಚಕ್ರಪಾಣಿ ನೃತ್ಯಕಲಾ ಕೇಂದ್ರ ಇವರಿಂದ ಜಾನಪದ ಶೈಲಿಯ ನೃತ್ಯ ರೂಪಕ ‘ಕೋಡ್ದಬ್ಬು ತನ್ನಿಮಾನಿಗ’ ಕೂಡಾ ಪ್ರದರ್ಶನಗೊಂಡಿತು.