ಕಾರ್ಕಳ : ತಾ.ಪಂ ಮತ್ತು ಜಿ.ಪಂ ಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶತಸಿದ್ಧ-ಡಾ.ಎಂ. ವೀರಪ್ಪ ಮೊಯ್ಲಿ

Update: 2016-02-15 13:12 GMT
ಸಭೆಯನ್ನುದ್ದೇಶಿಸಿ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿದರು.

ಕಾರ್ಕಳ : ತಾ.ಪಂ ಮತ್ತು ಜಿ.ಪಂ ಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಶತಸಿದ್ಧ. ಕಾಂಗ್ರೆಸ್ ಈ ಹಿಂದೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿತು ಮತ್ತು ಅದಕ್ಕಾಗಿ ದುಡಿದಿತ್ತು. ಎಂದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹಾಲಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸಿ.ಇ.ಟಿ. ಯ ಮೂಲಕ ಬಡವರಿಗೆ ಉನ್ನತ ಶಿಕ್ಷಣದ ಅವಕಾಶ, ಗ್ರಾಮ ಸ್ವರಾಜ್ ವ್ಯವಸ್ಥೆಗೆ ಜೀವ ತುಂಬುವ ಪಂಚಾಯತ್ ರಾಜ್ ಮಸೂದೆಯ ಅನುಷ್ಠಾನ, ಮಹಿಳಾ ಮೀಸಲಾತಿ, ಉದ್ಯೋಗ ಖಾತರಿ ಯೋಜನೆ, ಅಲ್ಲದೆ ರಾಜ್ಯ ಸರ್ಕಾರ ಅನುಷ್ಠನಕ್ಕೆ ತಂದಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ, 72 ಸಾವಿರ ಕೋಟಿಗೂ ಮಿಕ್ಕಿದ ಸಾಲಮನ್ನಾ, ಆಶ್ರಯ ಮನೆಯ ಸಾಲ ಮನ್ನಾ ಇವೇ ಮೊದಲಾದ ಜನಪರ ಯೋಜನೆಗಳು ಕಾಂಗ್ರೆಸ್ ಪಕ್ಷದಿಂದಲ್ಲದೆ ಅನ್ಯ ಪಕ್ಷಗಳಿಂದ ಸಾಧ್ಯವಿಲ್ಲ. 

ಜನಧನ ಯೋಜನೆಯ ಮೂಲಕ ಶೂನ್ಯ ಖಾತೆಯನ್ನು ತೆರೆಸಿ ಓ.ಡಿ. ವ್ಯವಸ್ಥೆ ಹಾಗೂ ಒಬ್ಬೊಬ್ಬನ ಖಾತೆಗೆ ಕಪ್ಪು ಹಣದಿಂದ ಗಳಿಕೆಯಾದ ಹದಿನೈದು ಲಕ್ಷ ರೂಪಾಯಿ ಠೇವಣಿ ಮುಂತಾದ ಸುಳ್ಳು ಭರವಸೆಗಳೊಂದಿಗೆ ಕಳೆದ ಲೋಕ ಸಭಾ ಚುನಾವಣೆಯಲ್ಲಿ ಬಿ.ಜಿ.ಪಿ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯಿತು. ಆದರೆ ಅಧಿಕಾರ ಪಡೆದ ಬಳಿಕ ಇದೊಂದು ಚುನಾವಣಾ ಗಿಮಿಕ್ ಎಂದು ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹೇಳಿರುವುದು ಪ್ರಜಾ ತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮಾಡಿದ ಮಹಾ ಮೋಸ ಎಂದರು. ಇದೀಗ ನಿಶೀಚರರಂತೆ ಬಿಜೆಪಿಗರು ರಾತ್ರಿಯ ಹೊತ್ತು ಕತ್ತಲಲ್ಲಿ ಸಂಚರಿಸಿ ಮತದಾರನಿಗೆ ವಿವಿಧ ಆಮಿಷಗಳನ್ನೊಡ್ಡಿ ಅನೈತಿಕ ಪಥದಲ್ಲಿ ಓಟಿನ ದರೋಡೆ ಮಾಡುತ್ತಿದ್ದಾರೆ. ತಾ.ಪಂ/ ಜಿ.ಪಂ. ಅಧಿಕಾರ ಹಿಡಿಯಲು ಶತಾಯ ಗತಾಯ ಹುನ್ನಾರ ನಡೆಸುತ್ತಿದ್ದಾರೆ. ಜನತೆ ಹಗಲು ಕಂಡ ಬಾವಿಗೆ ರಾತ್ರಿ ಬೀಳಬಾರದು ಅವರು ಮಾಳ ಕೂಡುಬೆಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಡಿದರು. ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ತ್ರಿಸ್ಥರ ಆಡಳಿತ ವ್ಯವಸ್ಥೆಯ ಅನುಭವ ಹೊಂದಿರುವ ಮಂಜುನಾಥ ಪೂಜಾರಿ ಹಾಗೂ ತಾ.ಪಂ. ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಜಿ.ಪಂ. ಅಭ್ಯರ್ಥಿ ಮಂಜುನಾಥ್ ಪೂಜಾರಿ ತಾ.ಪಂ. ಅಭ್ಯರ್ಥಿಗಳಾದ ಗೀತಾ ಪೂಜಾರಿ, ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಡಿ.ಸಿ.ಸಿ ಉಪಾಧ್ಯಕ್ಷ ಅವಲೀನ್ ಲೂಯಿಸ್, ಯುವ ಕಾಂಗ್ರೇಸ್ ಅಧ್ಯಕ್ಷ ಶುಭಧ ರಾವ್, ವಕ್ತಾರ ನಕ್ರೆ ಬಿಪಿನ್‌ಚಂದ್ರ ಪಾಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಹೆಗ್ಡೆ, ಸ್ಥಾನೀಯ ಸಮಿತಿಯ ಅಧ್ಯಕ್ಷ ಅಶೋಕ್ ಬಲ್ಲಾಳ್ ಹಾಗೂ ಇತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News