‘ಕೆಲವರಿಂದ ಕೆಲವರಿಗಾಗಿರುವ ಸಮಾಜ’- ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಬಣ್ಣನೆ

Update: 2016-02-15 15:11 GMT

ಮೆಕ್ಸಿಕೊ ಸಿಟಿ, ಫೆ. 15: ಮೆಕ್ಸಿಕೊದ ಅತ್ಯಂತ ಬಡ ಹಾಗೂ ಅತ್ಯಂತ ಅಪಾಯಕಾರಿ ನಗರಗಳ ಪೈಕಿ ಒಂದಾಗಿರುವ ಎಕಟೆಪೆಕ್‌ನಲ್ಲಿ ರವಿವಾರ 3 ಲಕ್ಷಕ್ಕೂ ಅಧಿಕ ಜನರಿಗಾಗಿ ಪೋಪ್ ಫ್ರಾನ್ಸಿಸ್ ಸಾಮೂಹಿಕ ಪ್ರಾರ್ಥನೆ (ಮಾಸ್) ನಡೆಸಿ ಕೊಟ್ಟರು.

ಈ ಸಂದರ್ಭದಲ್ಲಿ ದೇಶದ ಶ್ರೀಮಂತ ಮತ್ತು ಮತ್ತು ಭ್ರಷ್ಟ ಕುಲೀನರ ವಿರುದ್ಧ ಕಿಡಿ ಕಾರಿದ ಪೋಪ್, ಮೆಕ್ಸಿಕನ್ ಸಮಾಜದಲ್ಲಿ ಅತ್ಯಂತ ಆಳವಾಗಿ ಬೇರುಬಿಟ್ಟಿರುವ ಅಸಮಾನತೆಯ ವಿರುದ್ಧ ಕಿಡಿಗಾರಿದರು.

 ಮೆಕ್ಸಿಕನ್ ಸಮಾಜವನ್ನು ‘‘ಕೆಲವರಿಗಾಗಿ ಕೆಲವರ ಸಮಾಜ’’ ಎಂದು ಬಣ್ಣಿಸಿದ ಅವರು, ತಮ್ಮನ್ನು ಇತರರಿಗಿಂತ ಶ್ರೇಷ್ಠರು ಎಂದು ಭಾವಿಸುವವರ ದುರಭಿಮಾನ ಮತ್ತು ಅಹಂಕಾರವನ್ನು ಟೀಕಿಸಿದರು.

‘‘ಅದು ನೋವು, ಹತಾಶೆ ಮತ್ತು ಸಂಕಟ ತುಂಬಿದ ಸಂಪತ್ತು. ಇದು ಒಂದು ಭ್ರಷ್ಟ ಸಮಾಜ ಅಥವಾ ಕುಟುಂಬ ತನ್ನ ಮಕ್ಕಳಿಗೆ ಕೊಡುವ ಬ್ರೆಡ್’’ ಎಂದು ಪೋಪ್ ಹೇಳಿದರು.

 ‘‘ಕನಸು ಕಾಣುವುದಕ್ಕಾಗಿ ವಲಸೆ ಹೋಗುವ ಅಗತ್ಯವಿರದ ಹಾಗೂ ಅವಕಾಶಗಳಿರುವ ನಾಡನ್ನಾಗಿ ಮೆಕ್ಸಿಕೊವನ್ನು ರೂಪಿಸಲು ಹೋರಾಡುವಂತೆ’’ ಅವರು ಧರ್ಮಾನುಯಾಯಿಗಳಿಗೆ ಕರೆ ನೀಡಿದರು. ಇಲ್ಲಿನ ಮಕ್ಕಳು ಮಾದಕ ದ್ರವ್ಯ ಪಾತಕಿಗಳ ಬಲೆಯಲ್ಲಿ ಸಿಕ್ಕಿಬೀಳದಂತೆ ಎಚ್ಚರ ವಹಿಸುವಂತೆ ಜನರಿಗೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ವಿಶ್ವದ ಅತ್ಯಂತ ಶ್ರೀಮಂತರ ಪೈಕಿ ಒಬ್ಬರಾಗಿರುವ ಬಿಲಿಯಾಧೀಶ ಕಾರ್ಲೋಸ್ ಸ್ಲಿಮ್ ಮೆಕ್ಸಿಕೊದವರು. ಭ್ರಷ್ಟಾಚಾರ ಕಳಂಕಿತ ಶ್ರೀಮಂತ ರಾಜಕೀಯ ವರ್ಗ ಇಲ್ಲಿದೆ. ಅದೇ ವೇಳೆ, ದೇಶದ ಹೆಚ್ಚಿನ ಜನರು ಬಡತನ ಮತ್ತು ಹಿಂದೆಯ ನೆರಳಲ್ಲಿ ಬದುಕುತ್ತಿದ್ದಾರೆ.

ಮೆಕ್ಸಿಕೊ ಸಿಟಿಯ ಉತ್ತರದಲ್ಲಿರುವ ಸಣ್ಣ ಸಿಂಡರ್‌ಬ್ಲಾಕ್ ಮನೆಗಳ ಸಾಲುಗಳನ್ನು ಹೊಂದಿರುವ ಎಕಟೆಪೆಕ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಘಟನೆಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿವೆ. ಅದೂ ಅಲ್ಲದೆ, ಇಲ್ಲಿ ಮಾದಕ ದ್ರವ್ಯ ಪಾತಕಿಗಳ ಹಲವು ಗುಂಪುಗಳಿವೆ.

 ‘‘ಸಾವಿನ ವ್ಯಾಪಾರಿ’’ಗಳಿಂದ ಮುಕ್ತವಾದ ಮೆಕ್ಸಿಕೊ ನಿರ್ಮಿಸಿ

‘‘ಸಾವಿನ ವ್ಯಾಪಾರಿ’’ಗಳಿಂದ ಮುಕ್ತವಾದ ದೇಶವೊಂದನ್ನು ಕಟ್ಟುವಂತೆ ಪೋಪ್ ಫ್ರಾನ್ಸಿಸ್ ಮೆಕ್ಸಿಕೊ ಜನತೆಗೆ ಕರೆ ನೀಡಿದರು. ಈ ಮೂಲಕ ಮಾದಕ ದ್ರವ್ಯ ಮಾಫಿಯಗಳು ನಡೆಸುವ ಹಿಂಸಾಚಾರವನ್ನು ಪೋಪ್ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.

16 ಲಕ್ಷ ಜನಸಂಖ್ಯೆಯ ಎಕಟೆಪೆಕ್ ನಗರ ಅಪರಾಧ ಕೃತ್ಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಮಹಿಳೆಯರು ಒಮ್ಮಿಂದೊಮ್ಮೆಲೆ ನಾಪತ್ತೆಯಾಗುತ್ತಾರೆ ಹಾಗೂ ಅವರ ಮೃತ ದೇಹಗಳು ಯಾರೂ ಹೋಗದ ಸ್ಥಳಗಳು ಮತ್ತು ನಾಲೆಗಳಲ್ಲಿ ಪತ್ತೆಯಾಗುತ್ತವೆ.

‘‘ಸಾವಿನ ವ್ಯಾಪಾರಿಗಳ ಕೈಯಲ್ಲಿ ನಾಶವಾಗುವ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಾವಿಗಾಗಿ ಕಣ್ಣೀರಿಡಬೇಕಾದ ಅಗತ್ಯವಿಲ್ಲದ ನಾಡೊಂದನ್ನು ನಿರ್ಮಿಸಲು ಹೋರಾಡಿ’’ ಎಂದು ಪೋಪ್ ತನ್ನ ಬಳಗಕ್ಕೆ ಕರೆ ನೀಡಿದರು.

ಎಕಟೆಪೆಕ್ ನಗರದಲ್ಲಿ 2014 ಜನವರಿ ಮತ್ತು 2015 ಸೆಪ್ಟಂಬರ್ ನಡುವೆ ಸುಮಾರು 600 ಮಹಿಳೆಯರು ಹತ್ಯೆಗೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News