×
Ad

ಉಡುಪಿಯಲ್ಲಿ ಹೆಲಿ ಟೂರಿಸಂಗೆ ಚಾಲನೆ

Update: 2016-02-15 20:50 IST

ಉಡುಪಿ, ಫೆ.15: ಪ್ರವಾಸೋದ್ಯಮ, ವ್ಯವಹಾರ ಹಾಗೂ ಜಾಲಿರೈಡ್ ಉದ್ದೇಶವನ್ನು ಇಟ್ಟುಕೊಂಡು ಉಡುಪಿ ಜಿಲ್ಲಾಡಳಿತದ ವತಿಯಿಂದ ದಿಲ್ಲಿ ಮೂಲದ ಚಿಪ್ಸನ್ ಏವಿಯೇಶನ್ ಕಂಪೆನಿ ಆರಂಭಿಸಿರುವ ಹೆಲಿ ಟೂರಿಸಂಗೆ ಇಂದು ಚಾಲನೆ ನೀಡಲಾಯಿತು.

ಆದಿಉಡುಪಿಯಲ್ಲಿರುವ ಹೆಲಿಪ್ಯಾಡ್‌ನಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ನೂತನ ಅನುಭವ ನೀಡುವ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿದರು. ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರಗಳು, ವ್ಯವಹಾರ, ಜಲಕ್ರೀಡೆ, ಸಾಹಸ, ಜಾಲಿರೈಡ್‌ಗಳನ್ನು ಗಮನದಲ್ಲಿರಿಸಿಕೊಂಡು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಲಿಟೂರಿಸಂನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ. ಅಗ್ನಿಶಾಮಕದಳದಿಂದ ಸುರಕ್ಷತೆ, ಪೊಲೀಸ್ ಭದ್ರತೆ ಹಾಗೂ ಅದಕ್ಕೆ ಅಗತ್ಯವಿರುವ ಜಾಗ ಒದಗಿಸುವುದು ಜಿಲ್ಲಾಡಳಿತ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಮಲ್ಪೆ, ಮಣಿಪಾಲ, ಉಡುಪಿ ಪರಿಸರದ ಐದು ನಾಟೆಕಲ್ ಮೈಲ್ ನಲ್ಲಿ ವಿಹರಿಸಲು ಹೆಲಿಕಾಪ್ಟರ್‌ಗೆ ಅನುಮತಿ ನೀಡಲಾಗಿದೆ. ಈ ಮೂರು ಸ್ಥಳಗಳಿಗೆ ಕೇಂದ್ರ ಪ್ರದೇಶವಾಗಿರುವ ಆದಿಉಡುಪಿಯನ್ನು ಹೆಲಿಟೂರಿಸಂಗೆ ಆಯ್ಕೆ ಮಾಡಲಾಗಿದೆ. ಇದು ಬಿಟ್ಟು ಬೇರೆ ಸ್ಥಳಗಳಿಗೆ ತೆರಳಬೇಕಾದರೆ ಪ್ರತ್ಯೇಕ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಇದನ್ನು 24 ಗಂಟೆಗಳಲ್ಲಿ ಒದಗಿಸಲಾಗುತ್ತದೆ. ಕೊಲ್ಲೂರಿಗೆ ತೆರಳುವವರಿಗೆ ಅರೆಶಿರೂರಿನಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಇದೆ ಎಂದು ಅವರು ವಿವರಿಸಿದರು.

ಕಂಪೆನಿಯವರು ಪ್ರತಿ ತಿಂಗಳು 3,000 ರೂ. ಹಣವನ್ನು ಜಿಲ್ಲಾಡಳಿತಕ್ಕೆ ಪಾವತಿಸಬೇಕು. ಅದೇ ರೀತಿ ಶಾಶ್ವತವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಸಹಿತ ಒಂದು ವಾಹನ ಮತ್ತು ಪೊಲೀಸ್ ಪಡೆಯನ್ನು ಹೆಲಿಪ್ಯಾಡ್‌ನಲ್ಲಿ ನಿಯೋಜಿಸಲಾಗುವುದು. ಅದಕ್ಕೆ ಕಂಪೆನಿಯವರು ಆಯಾ ಇಲಾಖೆಗಳಿಗೆ ಅದರ ವೆಚ್ಚವನ್ನು ಪಾವತಿಸುತ್ತಾರೆ ಎಂದು ಅವರು ಹೇಳಿದರು.

ಚಿಪ್ಸನ್ ಏವಿಯೇಶನ್ ಕಂಪೆನಿಯ ನಿರ್ದೇಶಕ ಸುನೀಲ್ ನಾರಾಯಣ್ ಮಾತನಾಡಿ, ಹೆರಿಟೇಜ್, ಆರೋಗ್ಯ, ಸಾಹಸ ಪ್ರವಾಸೋದ್ಯಮಕ್ಕೆ ಒತ್ತು ನೀಡುವುದು ನಮ್ಮ ಮುಖ್ಯ ಉದ್ದೇಶ. ಕೇರಳ ರಾಜ್ಯದಲ್ಲಿ 2 ವರ್ಷಗಳ ಹಿಂದೆ ಆರಂಭಿಸಿರುವ ಹೆಲಿ ಟೂರಿಸಂ ಇದೀಗ ಯಶಸ್ವಿಯಾಗಿ, ಪ್ರತಿ ತಿಂಗಳು 80 ಗಂಟೆ ಕಾಲ ಹಾರಾಟ ಮಾಡಲಾಗುತ್ತದೆ. ಉಡುಪಿಯಲ್ಲೂ ಅದೇ ರೀತಿಯ ಸ್ಪಂದನೆ ಸಿಗಬಹುದು ಎಂಬ ವಿಶ್ವಾಸ ಇದೆ ಎಂದರು.

ಇಲ್ಲಿ ಶಾಶ್ವತವಾಗಿ ಒಂದು ಹೆಲಿಕಾಪ್ಟರ್‌ನ್ನು ನಿಯೋಜಿಸಲಾಗುವುದು. ಮುಂದೆ ಅಗತ್ಯ ಬಿದ್ದರೆ ಹೆಚ್ಚುವರಿ ಹೆಲಿಕಾಪ್ಟರನ್ನು ತರಿಸಲಾಗುವುದು. ಇದರಲ್ಲಿ ಪೈಲಟ್ ಸಹಿತ ಒಟ್ಟು ಏಳು ಮಂದಿ ಕುಳಿತುಕೊಳ್ಳಬಹುದಾಗಿದೆ. 10 ನಿಮಿಷಗಳ ಹಾರಾಟಕ್ಕೆ 3,000 ರೂ. ಶುಲ್ಕ ವಿಧಿಸಲಾಗುತ್ತದೆ. ಒಂದು ಗಂಟೆ ಹಾರಾಟಕ್ಕೆ ಸೇವಾ ತೆರಿಗೆ ಸಹಿತ 97 ಸಾವಿರ ರೂ. ನೀಡಬೇಕಾಗುತ್ತದೆ. ಹಂಪಿ, ಬಳ್ಳಾರಿ ಸೇರಿದಂತೆ ಹಲವು ಉತ್ಸವಗಳಿಗೂ ನಮ್ಮ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ ಎಂದು ಅವರು ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ಹಾಗೂ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಪೌರಾಯುಕ್ತ ಡಿ.ಮಂಜುನಾಥಯ್ಯ, ಪ್ರವಾಸೋದ್ಯಮ ಇಲಾಖೆ ಯ ಸಹಾಯಕ ನಿರ್ದೇಶಕ ನಾಗರಾಜ್, ಪತ್ರಕರ್ತರು ಹೆಲಿಕಾಪ್ಟರ್ ಮೂಲಕ ಮಲ್ಪೆ, ಉಡುಪಿ ಪರಿಸರದಲ್ಲಿ ಪ್ರಯಾಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News