×
Ad

ಉಳ್ಳಾಲ : ಸಮುದ್ರ ಪಾಲಾದ ನಾಲ್ಕು ಯುವಕರ ಮೃತದೇಹ ಪತ್ತೆ

Update: 2016-02-15 21:21 IST
ಶೋಧ ಕಾರ್ಯಚರಣೆಯಲ್ಲಿ ಸಚಿವ ಯು.ಟಿ ಖಾದರ್

ಉಳ್ಳಾಲ:ಆದಿತ್ಯವಾರ ಮಧ್ಯಾಹ್ನ ಸೋಮೇಶ್ವರದ ಸಮುದ್ರ ಕಿನಾರೆಯಲ್ಲಿ ಈಜಲು ತೆರಳಿ ನೀರು ಪಾಲಾದ ಹಾಸನ ಮೂಲದ ನಾಲ್ಕು ಯುವಕರ ಮೃತದೇಹವು ಘಟನಾ ಸ್ಥಳದಲ್ಲೇ ದೊರಕಿದ್ದು ,ಉಳ್ಳಾಲ ಪೋಲೀಸರು ಮೃತದೇಹಗಳನ್ನು ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.

        ಹಾಸನದ ಮಿರ್ಜಾ ಮೊಹಲ್ಲಾ ,ಹುಣಸೀಕೆರೆ ರಸ್ತೆ ಎರಡನೇ ಕ್ರಾಸ್ ನಿವಾಸಿಗಳಾದ ಆರು ಜನ ಸ್ನೇಹಿತರು ಉಳ್ಳಾಲ ಸಯ್ಯದ್ ಮದನಿ ದರ್ಗಾ ವೀಕ್ಷಣೆ ಮಾಡಲು ಭಾನುವಾರ ಉಳ್ಳಾಲಕ್ಕೆ ಬಂದಿದ್ದರು. ಬಳಿಕ ಅವರು ದರ್ಗಾ ಭೇಟಿ ಮಾಡದೇ ನೇರವಾಗಿ ಸೋಮೇಶ್ವರ ಕಡಲ ಕಿನಾರೆಗೆ ತೆರಳಿ ನೀರಿನಲ್ಲಿ ಆಟಕ್ಕಿಳಿದಿದ್ದರು.ಈ ಸಂಧರ್ಭ ಮಹಮ್ಮದ್ ಶಬೀರ್ ಅವರ ಮಗ ಮಹಮ್ಮದ್ ಹನೀಫ್(20) ಕಲಂದರ್ ಅವರ ಮಗನಾದ ಮಹಮ್ಮದ್ ಸಿಯಾಬ್(19) ಇಕ್ಬಾಲ್ ಪಾಷಾ ಮಗನಾದ ಇಮ್ರಾನ್ ಪಾಷಾ (19)ಸಯ್ಯದ್ ಫರೋರ್ ಮಗನಾದ ಸಯ್ಯದ್ ಖಲೀಲ್(19) ಸಮುದ್ರಪಾಲಾಗಿ ಈಜು ತಿಳಿಯದೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಸಮುದ್ರಪಾಲಾಗಿದ್ದರು. ಈ ಸನ್ನಿವೇಶವನ್ನು ದಡದಲ್ಲಿ ನಿಂತು ಕಣ್ಣಾರೆ ನೋಡಿ ಈಜು ತಿಳಿಯದೆ ಸ್ನೇಹಿತರನ್ನು ರಕ್ಷಿಸಲು ಅಸಹಾಯಕರಾದ ಇನ್ನಿಬ್ಬರು ಸ್ನೇಹಿತರಾದ ಬಶೀರ್ ಅಹಮ್ಮದ್‌ರ ಪುತ್ರ ಸಕಲೆಮ್ ಸಾಹಿಲ್(18) ಮತ್ತು ಮಹಮ್ಮದ್ ಫಾಝಿಲ್ ಅವರ ಪುತ್ರನಾದ ಸಾಧಿಕ್ ಪಾಷಾ (20) ಬದುಕುಳಿದಿದ್ದು , ಘಟನೆ ಕುರಿತು ಉಳ್ಳಾಲ ಪೋಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದರು.

ತಕ್ಷಣ ಕಾರ್ಯಪೃವೃತ್ತರಾದ ಪೋಲೀಸರು, ಸ್ಥಳೀಯ ಈಜುರಕ್ಷಕ ದಳದವರು ,ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಿಂದ ಆದಿತ್ಯವಾರ ಕಾರ್ಯಾಚರಣೆ ಆರಂಭಿಸಿದ್ದರು. ಭಾನುವಾರ ಮಧ್ಯರಾತ್ರಿ ಸಮುದ್ರದ ಅಲೆಗಳಲ್ಲಿ ಕಲೀಲ್ ಮತ್ತುಇಮ್ರಾನ್ ಅವರ ಎರಡು ಮೃತದೇಹಗಳು ತೇಳಿಬಂದಿವೆ. ಇದನ್ನು ನೋಡಿದ ಈಜುಗಾರರು ಮೃತದೇಹಗಳನ್ನು  ದಡಕ್ಕೆ ಸೇರಿಸಿದ್ದಾರೆ .ಶೋಧ ಕಾರ್ಯಾಚರಣೆಯಲ್ಲಿ ಸ್ಥಳೀಯ ಶಾಸಕ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಹಾಜರಿದ್ದು ಪೋಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು . ಉಳಿದಿಬ್ಬರಾದ ಹನೀಫ್ ಮತ್ತು ಸೀಯಾಬ್‌ರ ಮೃತದೇಹಗಳು ಸೋಮವಾರ ಬೆಳಿಗ್ಗೆ ಅದೇ ಸ್ಥಳದಲ್ಲಿ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News