×
Ad

ಉಪ್ಪಿನಂಗಡಿ: ಪೊಲೀಸ್ ಜನಸಂಪರ್ಕ ಸಭೆ

Update: 2016-02-15 23:24 IST

ಪುತ್ತೂರು, ಫೆ.15: ಉಪ್ಪಿನಂಗಡಿ ಪರಿಸರದಲ್ಲಿ ಸಮಾಜಘಾತಕ ಶಕ್ತಿಗಳು ಮೇಲೈಸುತ್ತಿದೆ. ಈ ಹಿಂದೆ ಎಸ್ಸೈ ಶಿವಕುಮಾರ್, ವೃತ್ತ ನಿರೀಕ್ಷಕ ಸುರೇಶ್ ಕುಮಾರ್‌ರ ಮೇಲೆ ಪೊಲೀಸ್ ಠಾಣೆಯ ಮುಂದೆಯೇ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದರೂ ಯಾವೊಂದು ಕ್ರಮ ಕೈಗೊಳ್ಳಲಾಗಿಲ್ಲ. ಅದಲ್ಲದೆ ಸಂಚಾರ ಪೊಲೀಸ್ ಸಿಬ್ಬಂದಿಗೂ ಹಲ್ಲೆ ನಡೆಸಲಾಗಿದೆ. ಸ್ವತಃ ತಮ್ಮನ್ನೇ ರಕ್ಷಿಸಲಾಗದ ಪೊಲೀಸ್ ಇಲಾಖೆಗೆ ನಾಗರಿಕರನ್ನು ರಕ್ಷಿಸುವ ಬದ್ಧತೆ ಇದೆಯೇ ಎಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಉದ್ಯಮಿ ಯು.ಜಿ.ರಾಧಾ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪುತ್ತೂರು ಎಎಸ್ಪಿ ರಿಷ್ಯಂತ್, ತಾನು ಕರ್ತವ್ಯಕ್ಕೆ ಹಾಜರಾದ ಬಳಿಕ ಸವಣೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೃತ್ಯವೊಂದು ನಡೆದಿತ್ತು. ಅದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾದೆ. ಉಪ್ಪಿನಂಗಡಿಯಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿ ಎಂದು ಮುಸ್ತಫಾ ಕೆಂಪಿ ಹೇಳಿದರು.ಉಪ್ಪಿನಂಗಡಿಯಲ್ಲಿ ಶಾಂತಿಭಂಗ ಪಡಿಸುವ ಪ್ರಯತ್ನ ನಡೆಯುತ್ತಿದೆ. 
ಪೊಲೀಸ್ ಇಲಾಖೆ ಸೌಮ್ಯವಾಗಿ ವರ್ತಿಸುತ್ತಿರುವುದು ಈ ಅವಾಂತರಗಳಿಗೆ ಕಾರಣವಾಗಿದೆ. ಯಾವುದೇ ಮತೀಯ ಸಂಘಟನೆ ಅಥವಾ ರಾಜಕೀಯ ಸಂಘಟನೆಗಳೇ ಆಗಲಿ ಶಾಂತಿ ಕದಡುವ ಕೃತ್ಯಕ್ಕಾಗಿ ಬೀದಿಗಿಳಿದರೆ ಮೊದಲು ದಂಡ ಪ್ರಯೋಗ ಮಾಡಬೇಕು ಎಂದು ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ಒತ್ತಾಯಿಸಿದರು.
ಪೊಲೀಸ್ ಇಲಾಖೆ ಯಾವುದೇ ಪ್ರಭಾವಗಳಿಗೆ ಮಣಿದು ತಾರತಮ್ಯವೆಸಗಬಾರದು. ಪ್ರಕರಣದ ಬಗ್ಗೆ ಕೂಲಂಕಶ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಉದ್ಯಮಿ ಯು.ರಾಮ ಹೇಳಿದರು.

ವೃತ್ತ ನಿರೀಕ್ಷಕ ಅನಿಲ್ ಕುಲಕರ್ಣಿ, ಸ್ಥಳೀಯ ಮುಖಂಡರಾದ ಕರುಣಾಕರ ಸುವರ್ಣ, ಹಾರೂನ್ ರಶೀದ್ ಅಗ್ನಾಡಿ, ಪ್ರಶಾಂತ್ ಡಿಕೋಸ್ತ, ಜಗದೀಶ್ ಶೆಟ್ಟಿ, ಯಶವಂತ ಜಿ. ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಮನೋಹರ್ ಸ್ವಾಗತಿಸಿದರು, ದೇವಿದಾಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News