ಬೆದರಿಕೆಯ ವಿರುದ್ಧ ಹೋರಾಟ: ಸಿಪಿಎಂ ನಾಯಕ ಕಾರಟ್
ಹೊಸದಿಲ್ಲಿ, ಫೆ.15: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿವಾದದ ಕುರಿತಾದ ತಮ್ಮ ನಿಲುವಿಗೆ ‘ದೇಶ ವಿರೋಧಿ’ ಎಂಬ ಹಣೆಪಟ್ಟಿ ಹಚ್ಚುತ್ತಿರುವುದರ ಬಗ್ಗೆ ತಮಗೆ ‘ಯಾವುದೇ ಭಯವಿಲ್ಲ. ಯಾವುದೇ ಬೆದರಿಕೆಯ ವಿರುದ್ಧ ತಾವು ಹೋರಾಡುತ್ತೇವೆಂದು ಎಡಪಕ್ಷಗಳಿಂದು ಹೇಳಿವೆ.
ಸಿಪಿಎಂ ನಾಯಕ ಸೀತಾರಾಮ ಯೆಚೂರಿಯವರಿಗೆ ಈ ವಿಷಯದಲ್ಲಿ ಬೆದರಿಕೆ ಕರೆಗಳು ಬಂದ ಬಳಿಕ ಅವುಗಳ ಈ ಹೇಳಿಕೆ ಹೊರಟಿದೆ.
ಘಟನೆಯನ್ನು ಖಂಡಿಸಿರುವ ಜೆಡಿಯು, ಯೆಚೂರಿಯವರಿಗೆ ಬಂದಿರುವ ಬೆದರಿಕೆಗಳು ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ದಾಳಿಯೆಂದು ವ್ಯಾಖ್ಯಾನಿಸಿದ್ದು, ಈ ಬೆಳವಣಿಗೆಯನ್ನು ‘ಹೊಸ ರೀತಿಯ ತುರ್ತು ಪರಿಸ್ಥಿತಿ’ ಎಂದು ಕರೆದಿದೆ.
ಈ ಎಲ್ಲ ಬೆದರಿಕೆ ಕರೆಗಳನ್ನು ಎದುರಿಸಲು ತಾವು ಸಿದ್ಧರಿದ್ದೇವೆ. ತಾವು ಚಿಂತಿತರಾಗಿಲ್ಲ. ತಮಗೆ ದೇಶವಿರೋಧಿಗಳೆಂಬ ಹಣೆಪಟ್ಟಿ ಕಟ್ಟುತ್ತಿರುವ ಬಗ್ಗೆ ಚಿಂತೆಯಿಲ್ಲ. ತಾವಿದನ್ನು ಎದುರಿಸಲು ಸಿದ್ಧರಿದ್ದೇವೆ ಹಾಗೂ ಅದರ ವಿರುದ್ಧ ಹೋರಾಡುತ್ತೇವೆಂದು ಸಿಪಿಎಂ ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ.
ಬೆದರಿಕೆ ಕರೆಗಳು ಹಾಗೂ ಸಿಪಿಎಂ ಮುಖ್ಯಾಲಯದ ಮೇಲಿನ ದಾಳಿಗಳು, ಜೆಎನ್‌ಯು ವಿದ್ಯಾರ್ಥಿ ಸಮುದಾಯದ ಮೇಲೆ ದೌರ್ಜನ್ಯ ಹಾಗೂ ಕ್ಯಾಂಪಸ್‌ನಲ್ಲಿ ಸರಕಾರಿ ಪ್ರಾಯೋಜಿತ ಹಿಂದುತ್ವ ಸಿದ್ಧಾಂತ ಹೇರಿಕೆಯ ವಿರುದ್ಧ ‘ದೃಢ’ ನಿಲುವಿಗೆ ಎಡಪಕ್ಷಗಳಿಗೆ ಬಲಪಂಥೀಯ ಸಂಘಟನೆಗಳು ನೀಡಿರುವ ಪ್ರತಿಕ್ರಿಯೆಯಾಗಿದೆಯೆಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನಾಕಾರರನ್ನು ಬೆಂಬಲಿಸಿದುದಕ್ಕಾಗಿ ಅದೇ ರೀತಿಯ ಬೆದರಿಕೆ ಕರೆಗಳು ಬಂದಿವೆಯೆಂದು ಪ್ರತಿಪಾದಿಸಿರುವ ಸಿಪಿಐ ನಾಯಕ ಡಿ. ರಾಜಾ ಈ ವಿಷಯವನ್ನೀಗ ಔಪಚಾರಿಕವಾಗಿ ಸರಕಾರದ ಬಳಿಗೆ ಒಯ್ಯಲಾಗುವುದು ಎಂದಿದ್ದಾರೆ.
ತನಗೂ ಬೆದರಿಕೆಯ ಕರೆಗಳು ಬರುತ್ತಿವೆ. ಗೃಹ ಸಚಿವರನ್ನು ಭೇಟಿಯಾಗಿದ್ದ ವೇಳೆ, ಅನಾಮಧೇಯ ಕರೆಗಳು ಬರುತ್ತಿರುವುದು ಹಾಗೂ ತಮ್ಮನ್ನು ಗುಂಡಿಕ್ಕಿ ಕೊಲ್ಲುವೆವೆಂದು ಬೆದರಿಸಿರುವ ವಿಚಾರವನ್ನು ಅವರಿಗೆ ತಿಳಿಸಿದ್ದೇವೆ. ಈ ಎಲ್ಲ ಘಟನೆಗಳು ನಡೆಯುತ್ತಿವೆ. ಆದುದರಿಂದ ತಾವದನ್ನು ಔಪಚಾರಿಕವಾಗಿ ಸರಕಾರದ ಬಳಿಗೆ ಒಯ್ಯಲಿದ್ದೇವೆಂದು ಅವರು ಹೇಳಿದ್ದಾರೆ.