ಜೆಎನ್‌ಯುನಲ್ಲಿ ಆರೆಸ್ಸೆಸ್ ಅಜೆಂಡಾ ಜಾರಿಗೊಳಿಸಲು ಯತ್ನ: ಮಾಯಾವತಿ
ಲಕ್ನೋ,ಫೆ.15: ಆರೆಸ್ಸೆಸ್‌ನ ‘‘ತೀವ್ರ ಮತ್ತು ಆಕ್ರಮಕ ಕಾರ್ಯಸೂಚಿ’’ಯ ಅನುಷ್ಠಾನಕ್ಕಾಗಿ ಬಿಜೆಪಿಯು ಜೆಎನ್‌ಯುವನ್ನು ರಾಷ್ಟ್ರವಿರೋಧಿ ಎಂದು ಬಿಂಬಿಸುತ್ತಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು,ದೇಶದ್ರೋಹದ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರನ್ನು ಬಂಧಿಸಿರುವುದು ರಾಜಕೀಯ ಪಿತೂರಿಯಾಗಿದೆ ಎಂದು ಬಣ್ಣಿಸಿದರು.
ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯ ಬಳಿಕ ಜೆಎನ್‌ಯು ಘಟನೆವರೆಗೆ ಕೇಂದ್ರ ಸಚಿವರ ಅಥವಾ ಕೇಂದ್ರ ಸರಕಾರದ ಪಾತ್ರವು ಅತ್ಯಂತ ನಕಾರಾತ್ಮಕವಾಗಿದ್ದು, ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿಯನ್ನು ಸೂಚಿಸುತ್ತಿದೆ ಎಂದರು.
ದೇಶದ್ರೋಹದ ಆರೋಪದಲ್ಲಿ ಕನ್ಹಯ್ಯೋ ಕುಮಾರ್ ಬಂಧನವು ಆರಂಭದಲ್ಲಿಯೇ ತಪ್ಪಾಗಿದೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ದೇಶದ್ರೋಹದ ಆರೋಪದಲ್ಲಿ ಬಂಧಿಸಿದ್ದಾರೆ. ಆಕ್ಷೇಪಾರ್ಹ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯವಿರುವ ವೀಡಿಯೊದಲ್ಲಿ ಕನ್ಹಯ್ಯಿ ಎಲ್ಲಿಯೂ ಕಂಡು ಬರುತ್ತಿಲ್ಲ ಎಂದ ಅವರು, ಸರಕಾರವು ತನ್ನ ವಿರೋಧಿಗಳನ್ನು ರಾಷ್ಟ್ರವಿರೋಧಿಗಳೆಂದು ಘೋಷಿಸುವ ಹೊಸ ಅಸ್ತ್ರವನ್ನು ಬಳಸುತ್ತಿರುವಂತಿದೆ ಎಂದು ಹೇಳಿದರು.
ಒಂದೆಡೆ ಸಂಸತ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಹುತಾತ್ಮನೆಂದು ಬಣ್ಣಿಸಲಾದ ಕಾರ್ಯಕ್ರಮವನ್ನು ಸಂಘಟಿಸಿದವರನ್ನು ಬಂಧಿಸುತ್ತಿರುವ ಬಿಜೆಪಿ ಸರಕಾರವು ಇನ್ನೊಂದೆಡೆ ಗುರುವಿಗೆ ಮರಣ ದಂಡನೆಯನ್ನು ವಿರೋಧಿಸಿದ್ದ ಮತ್ತು ಆತನನ್ನು ಹುತಾತ್ಮನೆಂದು ಬಣ್ಣಿಸಿದ್ದ ಪಿಡಿಪಿಯೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಮೈತ್ರಿಗೆ ಮುಂದಾಗಿದೆ ಎಂದು ಮಾಯಾವತಿ ಟೀಕಿಸಿದರು.