ಸುಳ್ಯ: ಸಂಸದರ ಟೀಕೆಗೆ ರಮಾನಾಥ ರೈ ತಿರುಗೇಟು
ನೇಮ, ಕೋಲಗಳಿಗೆ ನಿನ್ನೆಯೂ ಹೋಗಿದ್ದೇನೆ. ಇವತ್ತು ಹೋಗುತ್ತೇನೆ, ನಾಳೆಯೂ ಹೋಗುತ್ತೇನೆ. ಇದನ್ನು ನಿಲ್ಲಿಸಲು ಕಟೀಲ್‌ರಿಂದ ಸಾಧ್ಯ ಇಲ್ಲ.
ಹೀಗೆಂದು ಖಡಕ್ ಆಗಿ ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ. ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಾವು ಕೋಲ ನೇಮಗಳಿಗೆ ಹೋಗುವ ಬಗ್ಗೆ ಸಂಸದ ನಳಿನ್‌ಕುಮಾರ್ ಕಟೀಲ್ ಟೀಕಿಸಿದ್ದಾರೆ. ನಮ್ಮನ್ನು ಎಲ್ಲ ಜಾತಿ ಧರ್ಮದವರು ಪ್ರೀತಿಯಿಂದ ಎಲ್ಲ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ನಾವೂ ಹೋಗುತ್ತೇವೆ. ಯಾಕೆಂದರೆ ಅದು ನಮ್ಮ ಸಂಸ್ಕೃತಿ. ಇದನ್ನು ಟೀಕಿಸುವುದು ಸರಿಯಲ್ಲ. ಆದರೆ ಅವರು ರಾತ್ರಿ ಎಲ್ಲಿ ಹೋಗುತ್ತಾರೆ, ರಾತ್ರಿಯ ವ್ಯವಹಾರಗಳೇನು? ಎನ್ನುವುದು ಸಾರ್ವಜನಿಕವಾಗಿ ಗೊತ್ತಾಗಿದೆ, ಪತ್ರಿಕೆಗಳಲ್ಲೂ ಬಂದಿದೆ. ನಾವು ಇನ್ನೊಬ್ಬರ ಖಾಸಗಿ ವಿಷಯವನ್ನು ಮಾತನಾಡಲು ಬಯಸುವುದಿಲ್ಲ. ಸಾರ್ವಜನಿಕ ಬದುಕಿನಲ್ಲಿ ಹೇಗಿರುತ್ತೇವೆ ಎನ್ನುವುದು ಮುಖ್ಯ. ಕೇವಲ ಭಾಷಣ ಮಾಡಿ ನಂ.1 ಸಂಸದ ಎಂದು ಬೋರ್ಡ್ ಹಾಕಿಕೊಂಡರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದವರು ಹೇಳಿದರು. ಅಂಗಾರರಿಗೂ ಟೀಕೆ:
ಸುಳ್ಯದಲ್ಲಿ 110 ಕೆವಿ ಸಬ್‌ಸ್ಟೇಶನ್ ಕುರಿತಂತೆ ಅರಣ್ಯ ಸಚಿವರ ಮೇಲೆ ಆರೋಪ ಮಾಡುತ್ತಿರುವ ಶಾಸಕ ಅಂಗಾರರಿಗೆ ಅರಣ್ಯ ಕಾನೂನಿನ ಕುರಿತಂತೆ ತಿಳುವಳಿಕೆ ಇಲ್ಲ. ಹೀಗಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬಿ.ರಮಾನಾಥ ರೈ ಟೀಕಿಸಿದರು. ಅರಣ್ಯ ಜಾಗಕ್ಕೆ ತನ್ನದೇ ಆದ ಕಾನೂನಿದೆ. ಅದರಂತೆ ಮುಂದುವರಿಯಬೇಕಾಗಿದೆ. ಅಂಗಾರರ ಮನೆ ಜಾಗದಲ್ಲಿ ಮಾಡಿದಂತೆ ಅರಣ್ಯ ಪ್ರದೇಶದಲ್ಲಿ ಮಾಡಲಾಗುವುದಿಲ್ಲ. ಅವರಿಗೆ ಈ ತಿಳುವಳಿಕೆ ಇಲ್ಲ ಎಂದು ಹೇಳಿದರು. ಗ್ರಾಮ ವಿಕಾಸ ಯೋಜನೆಗೆ ಗ್ರಾಮಗಳ ಬದಲಾವಣೆ ಕುರಿತಂತೆ ಅಂಗಾರರು ತನ್ನ ಮೇಲೆ ಮಂಡಿಸಿದ ಹಕ್ಕು ಚ್ಯುತಿಯನ್ನು ಪ್ರಸ್ತಾಪಿಸಿದ ಸಚಿವರು ಸಚಿವರ ಅನುಮೋದನೆಯೊಂದಿಗೆ ಎಂಬ ನಿಯಮವನ್ನು ಜಾರಿಗೆ ತಂದದ್ದೇ ಬಿಜೆಪಿಯವರು. ಹೀಗಾಗಿ ಅವರ ವಿರುದ್ದವೇ ಅವರು ಹಕ್ಕುಚ್ಯುತಿ ಮಂಡಿಸಲಿ. ಕೃಷ್ಣ ಪಾಲೇಮಾರ್ ಉಸ್ತುವಾರಿ ಸಚಿವರಾಗಿದ್ದಾಗ ಬಂಟ್ವಾಳದ ಕೆಲವು ಯೋಜನೆಗಳಿಗೆ ಹೀಗೆಯೇ ಮಾಡಿದ್ದರು . ಸಿ.ಟಿ. ರವಿ ಕೂಡಾ ಉಸ್ತುವಾರಿ ಸಚಿವರಾಗಿದ್ದಾಗ ಈ ರೀತಿ ಮಾಡಿದ್ದರು. ಆಗೆಲ್ಲಾ ನಾನು ಹಕ್ಕುಚ್ಯುತಿ ಮಂಡಿಸಲು ಹೋಗಿಲ್ಲ. ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ವಿಷಯ ತಿಳಿಸಿದ್ದೇನೆ ಎಂದರು.