ಸುಳ್ಯ: ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ : ರಮಾನಾಥ ರೈ ವಿಶ್ವಾಸ
ಸುಳ್ಯ: ಮುಂಬರುವ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬಹುತೇಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಬಿಜೆಪಿ ಸಾಧನೆ ಶೂನ್ಯ. ಅವರಿಗೆ ಧನಾತ್ಮಕವಾಗಿ ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಯಾವುದಾದರೂ ಸುಳ್ಳು ವಿಚಾರಗಳನ್ನು ಮುಂದಿಟ್ಟು ಅಪಪ್ರಚಾರ ಮಾಡಿ ಗೆಲುವಿಗಾಗಿ ಹವಣಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗಲ್ಲ. ನಮ್ಮ ಸರಕಾರ ಮಾಡಿರುವ ಹಲವು ಅಭಿವೃದ್ಧಿ ಯೋಜನೆಗಳೇ ನಮ್ಮನ್ನು ಗೆಲ್ಲಿಸುತ್ತದೆ. ನಿಗಮದ ಸಾಲ ಮನ್ನಾ, ಆಶ್ರಯ ಸಾಲ ಮನ್ನಾ, ತಮಿಳರಿಗೆ ಜಾತಿ ಪ್ರಮಾಣ ಪತ್ರ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಬಾರಿಯೂ ಪ್ರಗತಿಪರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅದನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದರು.
ಬಿಜೆಪಿಯವರು ಸುಳ್ಳನ್ನು ಜ್ವಾಲಾಮುಖಿಯಂತೆ ಹಬ್ಬಿಸುತ್ತಿದ್ದಾರೆ. ಆದರೆ ಅದು ಕ್ಷಣಿಕ. ಎತ್ತಿನಹೊಳೆ ಯೋಜನೆ ಜಾರಿಗೆ ತಂದದ್ದೇ ಅವರು. 94ಸಿ ಯೋಜನೆಯ ಕುರಿತಂತೆಯೂ ಅಪಪ್ರಚಾರ ಮಾಡಿದರು. ಹುಲಿ ಯೋಜನೆ, ಕಸ್ತೂರಿ ರಂಗನ್ ಹೀಗೆ ರಾಜಕೀಯ ಮಾಡಿದರು. ಇದೀಗ ಕುಮ್ಕಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಿದ್ಧರಾಮಯ್ಯ ಸರಕಾರವೇ ಬಗೆಹರಿಸುತ್ತದೆ ಎಂದು ಭರವಸೆ ನೀಡಿದ ರಮಾನಾಥ ರೈ, ಕಾಂಗ್ರೆಸ್‌ಗೆ ಎಲ್ಲೂ ಬಂಡಾಯದ ಭಯ ಇಲ್ಲ ಎಂದರು. ರಾಜ್ಯ ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಾ ಎಸ್.ಎಸ್.ಪ್ರಕಾಶಂ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮಂಗಳೂರಿನ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಅಶ್ರಫ್, ಕಾರ್ಪೋರೇಟರ್ ಪ್ರವೀಣ್‌ಚಂದ್ರ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ನಾಯಕರುಗಳಾದ ನಿತ್ಯಾನಂದ ಮುಂಡೋಡಿ, ಎಸ್.ಸಂಶುದ್ದೀನ್, ಕೆ.ಎಂ.ಮುಸ್ತಫ, ಚಂದ್ರಶೇಖರ ಕಾಮತ್, ಸುಧೀರ್ ರೈ ಮೇನಾಲ, ವಿನುತಾ ಪಾತಿಕಲ್ಲು, ಕೆ.ಗೋಕುಲ್‌ದಾಸ್, ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.