ಪುತ್ತೂರು : ಸುಳ್ಳು ಭರವಸೆ ಕಾಂಗ್ರೆಸ್ ಜಾಯಮಾನವಲ್ಲ- ಸಚಿವ ರಮಾನಾಥ ರೈ
ಪುತ್ತೂರು: ಸುಳ್ಳು ಮಾತು ಹಾಗೂ ಸುಳ್ಳು ಭರವಸೆಯ ಮೂಲಕ ಜನರನ್ನು ವಂಚನೆ ಮಾಡುವುದೇ ಬಿಜೆಪಿ ಜಾಯಮಾನವಾಗಿದ್ದು ಕಾಂಗ್ರೆಸ್ ಎಂದೂ ಆ ರೀತಿಯ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ಬಡವರ ಪಕ್ಷವಾಗಿದ್ದು ನಮ್ಮ ಭರವಸೆ, ಮಾತುಗಳು ನೇರವಾಗಿಯೇ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬುಧವಾರ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕುಮ್ಕಿ ಹಕ್ಕು ವಿಚಾರದಲ್ಲಿ ಬಿಜೆಪಿ ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ದೇಶದಲ್ಲಿ ಹಿಂದುಳಿದ ವರ್ಗದವರಿಗೆ , ಬಡವರಿಗೆ ಭೂಮಿ ಸಿಗಲು ಕಾಂಗ್ರೆಸ್ ಕಾರಣವಾಗಿದೆ. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತರದೇ ಇರುತ್ತಿದ್ದರೆ ಇಂದು ದೇಶದಲ್ಲಿ ಜಮೀನ್ದಾರರು ಮಾತ್ರ ಭೂಮಿಯನ್ನು ಹೊಂದಿರುತ್ತಿದ್ದರು. ದೇಶದಲ್ಲಿ ಬಡವರನ್ನು ಮತ್ತು ತುಳಿತಕ್ಕೊಳಗಾದವರನ್ನು ಅಧಿಕಾರಕ್ಕೆ ತಂದಿರುವ ಕೀರ್ತಿ ಕಾಂಗ್ರೆಸ್‌ಗೆ ಸೇರಿದೆ ಎಂದು ಹೇಳಿದರು.
ಕಳೆದ 10 ವರ್ಷದಲ್ಲಿ ಜಿಪಂ ವತಿಯಿಂದ ಏನೂ ಅಭಿವೃದ್ದಿಕೆಲಸಗಳು ನಡೆದಿಲ್ಲ. ಪುತ್ತೂರು ತಾಪಂ ನಿಂದ ಶೂನ್ಯ ಸಾಧನೆಯಾಗಿದೆ. ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ 94 ಸಿ ಕಾನೂನು ಜಾರಿಗೆ ತಂದು ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಕೆಲಸವನ್ನು ಮಾಡಿದೆ. ಜಿಲ್ಲೆಯ ಹಾಗೂ ತಾಲೂಕುಗಳ ಅಭಿವೃದ್ದಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಎತ್ತಿನ ಹೊಳೆ ವಿಚಾರದಲ್ಲಿ ಬಿಜೆಪಿಯವರು ಒಂದೊಂದು ಊರಿನಲ್ಲಿ ಒಂದೊಂದು ಹೇಳಿಕೆ ನೀಡುತ್ತಾರೆ. ಆ ಯೋಜನೆಯನ್ನು ಜಾರಿ ಮಾಡಿದ್ದೇ ಬಿಜೆಪಿಯ ಡಿ ವಿ ಸದಾನಂದ ಗೌಡರು. ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಎತ್ತಿನ ಹೊಳೆ ಬೇಕು ಎಂದು ಹೇಳುತ್ತಾರೆ ಮಂಗಳೂರಿನಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಯೋಜನೆಯನ್ನು ವಿರೋಧಿಸಿ ಮೆರವಣಿಗೆ ಮಾಡುತ್ತಾರೆ ಇದೆಲ್ಲವೂ ಜನರನ್ನು ದಿಕ್ಕು ತಪ್ಪಿಸುವ ಕಾರ್ಯವಾಗಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಎತ್ತಿನ ಹೊಳೆ ಯೋಜನೆಗೆ ಸಂಕಲ್ಪ ಮಾಡಿದ್ದಾರೆ. ಇದೆಲ್ಲವನ್ನೂ ಗಮನಿಸುವಾಗ ನಳಿನ್ ಕುಮಾರ್ ಯಾವ ಪಕ್ಷದಲ್ಲಿದ್ದಾರೆ ಎಂದು ಜನರಿಗೆ ಗೊಂದಲ ಶುರುವಾಗುತ್ತದೆ ಎಂದು ಲೇವಡಿ ಮಾಡಿದರು. ಬಡವರಿಗೆ ಅನ್ನ ಕೊಟ್ಟ ಕಾಂಗ್ರೆಸ್ ಸರಕಾರವನ್ನು ಜನ ಎಂದೂ ಕೈ ಬಿಡುವುದಿಲ್ಲ ಎಂದು ಶಾಸಕಿ ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡರಾದ ಸುದರ್ಶನ್, ಎನ್. ಸುಧಾಕರ ಶೆಟ್ಟಿ, ಅಬ್ದುಲ್ ರಹಿಮಾನ್ ಅರಿಯಡ್ಕ , ಜಿಪಂ ಹಾಗೂ ತಾಪಂ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು