ವೇಮುಲಾ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿಭಟನೆ
ಕೊಣಾಜೆ: ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಿ, ವಿದ್ಯಾರ್ಥಿ, ಯುವಜನ, ಅಧ್ಯಾಪಕ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರದಂದು ರಾಜ್ಯವ್ಯಾಪಿ ವಿಶ್ವವಿದ್ಯಾಲಯ ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ರಘು, ವಿ.ವಿ.ಗಳಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡಿದರೆ ಅವರನ್ನು ದೇಶದ್ರೋಹಿ ಎಂದು ಸಂಬೋಧಿಸುವುದರಲ್ಲಿ ನ್ಯಾಯವಿಲ್ಲ. ಜಾತಿ ಹೆಸರಲ್ಲಿ ಹೋರಾಟ ನಡೆಸಿದರೂ, ಅದನ್ನು ಅಳಿಸಿ ಒಗ್ಗಟ್ಟಾಗುವ ಉದ್ದೇಶ ಹೋರಾಟದಲ್ಲಿದೆ. ಈ ಮೂಲಕ ದೇಶ ಕಟ್ಟುವ ಕೆಲಸ ಆಗುತ್ತಿದೆ. ಜೀವ ಹುಟ್ಟಿಸುವ ಅಥವಾ ಸಾಯಿಸುವ ತಾಕತ್ತು ಪೊಲೀಸರಿಗೆ, ಸರಕಾರಕ್ಕೆ ಇಲ್ಲ. ಯುವಜನಾಂಗವನ್ನು ಸರಿಯಾದ ದಾರಿ ತೋರಿಸುವ ನಿಟ್ಟಿನಲ್ಲಿ ವಿ.ವಿ.ಗಳು ವೈಚಾರಿಕ ವಿ.ವಿ.ಗಳಾಗಿ ಬೆಳೆಯಬೇಕು ಮತ್ತು ವೇಮುಲಾ ಹತ್ಯೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸುವ ಕೆಲಸ ಆಗಬೇಕಿದೆ ಎಂದು ಒತ್ತಾಯಿಸಿದರು. ಮಂಗಳೂರು ವಿ.ವಿಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಹಾಗೂ ಕೆಳ ದರ್ಜೆ ನೌಕರರ ಮೇಲಿನ ಶೋಷಣೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ವಿರುದ್ಧ ಧ್ವನಿ ಎತ್ತದಿರುವುದು ವಿಪರ್ಯಾಸ, ರೋಹಿತ್ ವೇಮುಲ ಅಸಹಜ ಸಾವಿನ ಹೋರಾಟ ವಿ.ವಿ.ಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಹೇಳಿದರು. ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಚರಣ್ ಮಾತನಾಡಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗಾಗುವ ತೊಂದರೆ ಅಥವಾ ದೌರ್ಜನ್ಯಗಳ ಬಗ್ಗೆ ಮನವಿ ನೀಡಿದರೆ ಪರಿಹಾರ ಸಿಕ್ಕುತ್ತಿಲ್ಲ .ರೋಹಿತ್ ವೇಮುಲರಂತಹ ಅನೇಕ ವಿದ್ಯಾರ್ಥಿಗಳ ಶಿಕ್ಷಣ ಸಂಬಂಧಿ ಕನಸನ್ನು ಚಿವುಟುವ ಕೆಲಸ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವರು ಮಾಡುತ್ತಿದ್ದಾರೆ. ಅಲ್ಲದೆ ಸ್ವಾಯತ್ತ ಕಾಲೇಜಿಗಿಂತ ಮಂಗಳೂರು ವಿವಿಯಲ್ಲಿ ಅತ್ಯಧಿಕ ಶುಲ್ಕ ನೀಡಿ ವಿದ್ಯಾರ್ಥಿಗಳು ಕಲಿಯಬೇಕಾಗಿದೆ. ಹೀಗೆ ಆದರೆ ವಿದ್ಯಾರ್ಥಿಗಳು ಮನೆಗಳನ್ನು ಮಾರಿ ವಿದ್ಯಾರ್ಜನೆಯನ್ನು ಮಾಡಬೇಕಾಗಬಹುದು. ಈ ನಿಟ್ಟಿನಲ್ಲಿ ಸುಧಾರಣೆಯಾಗಬೇಕಾದ ಅಗತ್ಯ ಇದೆ ಎಂದು ಹೇಳಿದರು. ಈ ಸಂದರ್ಭ ಸಂಶೋಧನಾ ವಿದ್ಯಾರ್ಥಿ ಹರೀಶ್, ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಹಂಝ ಕಿನ್ಯಾ, ಪತ್ರಕರ್ತ ಸುರೇಶ್.ಬಿ, ಸಾತ್ವಿಕ್ ಪಿ.ಜಿ. ಎಸ್ ಎಫ್ ಐ ಜಿಲ್ಲಾ ಸಂಘಟಕಿ ಮಾಧುರಿ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.