ಮೂಡುಬಿದರೆ : ಮತದಾರ ಬಹಿಷ್ಕಾರ ನಿರ್ಧಾರ ಹಿಂಪಡೆದ ಗ್ರಾಮಸ್ಥರು
ಮೂಡುಬಿದರೆ: ಕಡಂದಲೆ ಗ್ರಾಮದ ಜೋಡುಕಟ್ಟೆಯಿಂದ ಮುಕ್ಕಡಪ್ಪುವರೆಗಿನ 5ಕೀ.ಮೀ.ರಸ್ತೆ ದುರವಸ್ಥೆಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಮತದಾನ ಬಹಿಷ್ಕಾರವನ್ನು ಮಂಗಳವಾರವಕಡಂದಲೆ ಗ್ರಾಮಸ್ಥರು ಹಿಂತೆಗೆದುಕೊಂಡಿದ್ದಾರೆ. ಫೆ.11ರಂದು ಜೋಡುಕಟ್ಟೆ ಸಭೆ ಸೇರಿದ ಜೋಡುಕಟ್ಟೆ, ಮುಕ್ಕಡಪ್ಪು ಪರಿಸರದ ಗ್ರಾಮಸ್ಥರು, ರಸ್ತೆ ದುರಸ್ತಿಯಾಗದಿರುವುದನ್ನು ವಿರೋಧಿಸಿ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಮತಚಲಾಯಿಸುವುದಿಲ್ಲ. ಯಾವುದೇ ಜನಪ್ರತಿನಿಧಿಗಳ ಭರವಸೆಗಳಿಗೂ ಕಿವಿಗೊಡುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳೇ ಬಂದು ಇಲ್ಲಿನ ವಾಸ್ತವ ಸ್ಥಿತಿಯನ್ನು ಅರಿತು, ಕ್ರಮ ಕೈಗೊಳಲಿ ಎಂದು ನಿರ್ಣಯಿಸಿದ್ದರು.
ಮೂಡುಬಿದರೆ ತಹಸೀಲ್ದಾರ್ ಮಹಮ್ಮದ್ ಇಸಾಕ್ ಮಂಗಳವಾರ ಜೋಡುಕಟ್ಟೆ ನಾದುರಸ್ತಿಯಲ್ಲಿರುವ ರಸ್ತೆಯನ್ನು ಪರಿಶೀಲಿಸಿ ಗ್ರಾಮಸ್ಥರ ಅಹವಾಲನ್ನು ಆಲಿಸಿದರು. ಮತದಾನ ಸಂವಿಧಾನದ ಹಕ್ಕು. ಅದನ್ನು ಕಡ್ಡಾಯವಾಗಿ ಮತದಾನ ಮಾಡಿ. ಒಂದು ವೇಳೆ ನಿಮಗೇನಾದರು ಅಸಮಾಧನಾವಿದ್ದರೆ, ಚಿಹ್ನೆಯನ್ನೊಳಗೊಂಡಿರುವ ‘ನೋಟಾ’ಕ್ಕೆ ನಿಮ್ಮ ಓಟು ಹಾಕಬಹುದು ಎಂದು ಸಲಹೆ ನೀಡಿದರು. ಹೆಚ್ಚು ನೋಟ ಮತಗಳು ಚಲಾವಣೆಯಾದಲ್ಲಿ ನಾವು ಕಾರಣವೇನೆಂಬುದನ್ನು ಪರಿಶೀಲಿಸುತ್ತೇವೆ ಎಂದರು.
ಹದಗೆಟ್ಟಿರುವ ರಸ್ತೆಯನ್ನು ಯಾವುದಾದರೂ ಯೋಜನೆಯಲ್ಲಿ ದುರಸ್ತಿಗೊಳಿಸುವಂಥೆ ಪಾಲಡ್ಕ ಗ್ರಾ.ಪಂ ಪಿಡಿಒ ಅವರಿಗೆ ತಹಸೀಲ್ದಾರ್ ಸೂಚಿಸಿದರು. ಜೋಡುಕಟ್ಟೆ-ಮುಕ್ಕಡಪ್ಪು ರಸ್ತೆ ದುರಸ್ತಿ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಸದಸ್ಯರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಗ್ರಾಮ, ನಮ್ಮರಸ್ತೆ ಸಹಿತ ವಿವಿಧ ಯೋಜನೆಗಳಲ್ಲಿ ಅನುದಾನ ಒದಗಿಸಲು ಸಾಧ್ಯವಿರುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಪಿಡಿಒ ರಾಜೇಂದ್ರ ಶೆಟ್ಟಿ ಭರವಸೆ ನೀಡಿದರು.
ಉಗ್ರಹೋರಾಟ:
ಕಾನೂನಿಗೆ ಗೌರವ ನೀಡಿ, ನಾವು ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಂಡಿದ್ದೇವೆ. ಚುನಾವಣೆ ಬಳಿಕ ರಸ್ತೆಯು ಇದೇ ಸ್ಥಿತಿಯಲ್ಲಿದ್ದಾರೆ, ಖಂಡಿತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸುರೇಂದ್ರ ಭಟ್ ಗ್ರಾಮಸ್ಥರ ಪರವಾಗಿ ಅಧಿಕಾರಿಗಳ ಗಮನಕ್ಕೆ ತಂದರು. ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ, ಕಡಂದಲೆ ಗ್ರಾಮಕರಣಿಕ ಕರಿಬಸಪ್ಪ, ಸಮಿತಿಯ ಅಧ್ಯಕ್ಷ ಜಾರ್ಜ್ ಫೆರ್ನಾಂಡಿಸ್, ಉಪಾಧ್ಯಕ್ಷ ಸುಂದರ್ ಶೆಟ್ಟಿ ಹಾಗೂ ಗ್ರಾಮಸ್ಥರು ಪಾಲ್ಗೊಂಡರು.