×
Ad

ಕೀಳಿಂಜೆ : 1-4ಕಿ.ಮೀ. ದೂರದ ಡಿಸಿ ಕಚೇರಿ ತಲುಪಲು 18ಕಿ.ಮೀ. ಸಾಗಬೇಕು!

Update: 2016-02-16 19:58 IST

ಉಡುಪಿ, ಫೆ.16: ಕೇವಲ ಮೂರುವರೆ ಕಿ.ಮೀ. ದೂರದಲ್ಲಿರುವ ಜಿಲ್ಲಾಧಿ ಕಾರಿ ಕಚೇರಿಯು ನಿಂತಲ್ಲೇ ಕಣ್ಣಿಗೆ ಕಾಣುವಂತಿದ್ದರೂ ಅಲ್ಲಿಗೆ ಆ ಗ್ರಾಮದ ಜನತೆ ತಲುಪಬೇಕಾದರೆ ಬರೋಬರಿ 18ಕಿ..ಮೀ. ದೂರ ಸುತ್ತು ದಾರಿ ಬಳಸಿ ಸಾಗಬೇಕಾಗಿದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ. ಇದು ಹಾವಂಜೆ ಗ್ರಾಪಂ ವ್ಯಾಪ್ತಿಯ ಹಾವಂಜೆ ಹಾಗೂ ಕೀಳಿಂಜೆ ಗ್ರಾಮದ ಜನತೆಯ ಗೋಳು. ಅದಕ್ಕೆ ಕಾರಣವಾಗಿರುವುದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಇರುವ ಮಣಿಪಾಲ ಎಂಡ್‌ಪಾಯಿಂಟ್‌ನ ತಪ್ಪಲಲ್ಲಿ ಹರಿಯುವ ಸ್ವರ್ಣ ನದಿ ಹಾಗೂ ಅದಕ್ಕೆ ಈವರೆಗೆ ನಿರ್ಮಾಣಗೊಳ್ಳದ ಸೇತುವೆ. ಹಾವಂಜೆ ಹಾಗೂ ಕೀಳಿಂಜೆ ಗ್ರಾಮದಲ್ಲಿ ಸಾವಿರಾರು ಕುಟುಂಬಗಳಿದ್ದು, ಇವರು ತಮ್ಮ ಕಣ್ಣೆದುರೇ ಕಾಣುವ ಜಿಲ್ಲಾಧಿಕಾರಿ ಕಚೇರಿ ಮತ್ತು ತುರ್ತು ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಹೋಗಬೇಕಾದರೆ ಒಂದು ಕಡೆಯಿಂದ (ಕೊಳಲ ಗಿರಿ- ಕೆ.ಜಿ.ರೋಡ್-ಅಂಬಾಗಿಲು-ಮಣಿಪಾಲ) 18ಕಿ.ಮೀ., ಇನ್ನೊಂದು ಕಡೆಯಿಂದ (ಹಾವಂಜೆ-ಪರೀಕ-ಆತ್ರಾಡಿ-ಮಣಿಪಾಲ) 16ಕಿ.ಮೀ. ದೂರ ವಾಗಿ ಹೋಗಬೇಕಾಗಿದೆ. ಇದಕ್ಕಾಗಿ ಇವರು ಒಂದು ತಾಸು ಬಸ್ಸಿನಲ್ಲಿ ಕೂತು 30ರೂ. ವ್ಯಯ ಮಾಡಬೇಕಾಗಿದೆ.

ಪರಾರಿ-ಶಿಮ್ರಾ ಸೇತುವೆ:

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿ.ಡಾ. ವಿ.ಎಸ್.ಆಚಾರ್ಯರ ಕಾಲದಲ್ಲಿ ಮಣಿಪಾಲ ಹಾಗೂ ಹಾವಂಜೆ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸ್ವರ್ಣ ನದಿಗೆ ಕೀಳಿಂಜೆ ಪರಾರಿ- ಶಿಮ್ರಾದಲ್ಲಿ ಸೇತುವೆ ನಿರ್ಮಿಸಲು ಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಅದಕ್ಕಾಗಿ ಸರ್ವೆ ಕೂಡ ನಡೆದಿತ್ತು. ಆದರೆ ಅದು ಈವರೆಗೂ ಕೈಗೂಡಿ ಬಂದಿಲ್ಲ. ಅದಕ್ಕಾಗಿ ಹಾವಂಜೆ ಗ್ರಾಮಸ್ಥರು ಕಳೆದ 10 ವರ್ಷಗಳಿಂದ ಚಾತಕಪಕ್ಷಿಯಂತೆ ಕಾಯು ತ್ತಲೇ ಇದ್ದಾರೆ. ಶಾಸಕ ಪ್ರಮೋದ್ ಮಧ್ವರಾಜ್‌ರ ಚುನಾವಣಾ ಪ್ರಣಾಳಿಕೆಯಲ್ಲೂ ಈ ಸೇತುವೆ ನಿರ್ಮಿಸುವ ಭರವಸೆಯನ್ನು ಜನತೆಗೆ ಕೊಟ್ಟಿದ್ದರು. ಇತ್ತೀಚೆಗೆ ಈ ಸೇತುವೆ ನಿರ್ಮಾಣಕ್ಕೆ ಪೂರಕವಾಗಿ ಕೀಳಿಂಜೆ ಪೆರಾರಿ ರಸ್ತೆಯನ್ನು 3.55ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇನ್ನೊಂದು ಬದಿ ಶಿಮ್ರಾದಲ್ಲಿ ಈಗಾಗಲೇ ರಸ್ತೆ ಸೌಲಭ್ಯಗಳಿವೆ. ಹಾಗಾಗಿ ಸೇತುವೆ ನಿರ್ಮಾಣಕ್ಕೆ ಬೇಕಾಗಿರುವ ರಸ್ತೆ ಸಮಸ್ಯೆ ದೂರವಾಗಿದೆ. ಈ ಸೇತುವೆ ನಿರ್ಮಾಣವಾದರೆ ಕುಂದಾಪುರದ ಜನತೆಗೆ ಮಣಿಪಾಲವು 15ಕಿ.ಮೀ. ಹತ್ತಿರವಾಗಲಿದೆ. ಕುಂದಾಪುರದಿಂದ ಬರುವವರು ಬ್ರಹ್ಮಾವರ -ಪೇತ್ರಿ-ಕೊಳಲಗಿರಿ- ಪೆರಾರಿ- ಪೆರಂಪಳ್ಳಿಯಾಗಿ ಮಣಿಪಾಲಕ್ಕೆ ಹೋಗಬಹು ದಾಗಿದೆ. ಹಾಗಾಗಿ ಈ ಸೇತುವೆ ಅಗತ್ಯವಾಗಿ ಹಾಗೂ ಆದಷ್ಟು ಶೀಘ್ರವೇ ನಿರ್ಮಾಣ ಆಗಬೇಕೆಂದು ಹಾವಂಜೆಯ ಸತೀಶ್ ಪೂಜಾರಿ ಆಗ್ರಹಿಸಿದ್ದಾರೆ.

ತೂಗುಸೇತುವೆ ಬೇಡಿಕೆ:

ಪರಾರಿಯಲ್ಲಿ ಸೇತುವೆ ನಿರ್ಮಾಣಗೊಂಡರೆ ಅಲ್ಲಿಂದ ಕೇವಲ ಒಂದು ಕಿ.ಮೀ. ದೂರದಲ್ಲಿರುವ ಕೀಳಂಜೆಯಲ್ಲಿ ಹೆರ್ಗ ಸಂಪರ್ಕಿಸುವ ಸೇತುವೆ ನಿರ್ಮಾಣಗೊಳ್ಳುವುದು ಕನಸಿನ ಮಾತು. ಆದುದರಿಂದ ಇಲ್ಲಿಗೊಂದು ತೂಗುಸೇತುವೆ ಮಂಜೂರು ಮಾಡಿಸಿ ಎಂಬುದು ಇಲ್ಲಿನ ಗ್ರಾಮಸ್ಥರ ಮನವಿ.ಕೀಳಂಜೆಯಲ್ಲಿ ಸುಮಾರು 92ಕುಟುಂಬಗಳಿದ್ದು, ಇವರೆಲ್ಲ ಸದ್ಯ ಉಡುಪಿಗೆ ಸಾಗಬೇಕಾದರೆ ದೋಣಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಈ ಗ್ರಾಮದ ಸಾಕಷ್ಟು ಮಂದಿ ಯುವಕರು, ವಿದ್ಯಾರ್ಥಿಗಳು, ಮಹಿಳೆಯರು ಮಣಿಪಾಲ, ಉಡುಪಿಯಲ್ಲಿ ಉದ್ಯೋಗ ಹಾಗೂ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇವರು ಕೀಳಂಜೆಯಿಂದ ದೋಣಿ ಮೂಲಕ ಹೆರ್ಗದಿಂದ ಬಸ್ಸಿನಲ್ಲಿ ಹೋಗಬೇಕಾಗಿದೆ. ಮಳೆಗಾಲದಲ್ಲಿ ಈ ನದಿಯನ್ನು ದಾಟುವುದು ಹರಸಾಹಸ ಹಾಗೂ ಅಪಾಯ.ಕೆಲವು ವರ್ಷಗಳ ಹಿಂದೆ ಹಾವಂಜೆ ಗ್ರಾಪಂ ಇಲ್ಲಿ ತೂಗುಸೇತುವೆ ನಿರ್ಮಿ ಸಲು 35ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು. ಅದಕ್ಕೆ ಬೇಕಾದ ಸರ್ವೆ ಕೂಡ ನಡೆದಿತ್ತು. ಆದರೆ ಸೇತುವೆ ವೆಚ್ಚ ದುಪ್ಪಟ್ಟು ಆದ ಪರಿಣಾಮ ಆ ಯೋಜನೆಯನ್ನು ಕೈಬಿಡಲಾಗಿತ್ತು.‘ಇಲ್ಲಿರುವವರು ಹೆಚ್ಚಿನವರು ಬಡವರು ಹಾಗೂ ಕೃಷಿಕರು. ನಮಗೆ ವಾಹನ ಸಾಗುವ ಸೇತುವೆ ನಿರ್ಮಿಸದಿದ್ದರೂ ತೊಂದರೆ ಇಲ್ಲ. ಕಾಲ್ನಡಿಗೆಯಲ್ಲಿ ಸಾಗಲು ಒಂದು ತೂಗುಸೇತುವೆಯನ್ನು ದಯಪಾಲಿಸಬೇಕು. ಮಳೆಗಾಲದಲ್ಲಿ ನೆರೆ ಬಂದಾಗ ಇಡೀ ಕೀಳಿಂಜೆ ದ್ವೀಪವಾಗಿ ಪರಿವರ್ತನೆಗೊಳ್ಳುತ್ತದೆ. ಅಂತಹ ಸಂದರ್ಭಲ್ಲಿ ಜೀವ ಉಳಿಸಿಕೊಳ್ಳಲು ಕೂಡ ಆಗುತ್ತದೆ’ ಎಂದು ಸ್ಥಳೀಯರಾದ ಸಾಧು ಪೂಜಾರಿ ಹೇಳುತ್ತಾರೆ.

ಸುಮಾರು 10ಕೋಟಿ ರೂ. ವೆಚ್ಚದಲ್ಲಿ ಕೀಳಿಂಜೆ ಪರಾರಿ- ಶಿಮ್ರಾ ಸೇತುವೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದ್ದು, ಅದರ ಟೆಂಡರ್ ಪ್ರಕ್ರಿಯೆ ನಡೆ ಯುತ್ತಿದೆ. ಆ ಕಾರ್ಯ ಪೂರ್ಣಗೊಂಡ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಲ್ಲೇ ಸಮೀಪ ಇರುವ ಕೀಳಂಜೆಯಲ್ಲಿ ತೂಗು ಸೇತುವೆ ನಿರ್ಮಿಸುವ ಬೇಡಿಕೆ ಕೂಡ ಇದ್ದು, ಅದನ್ನು ಪರಿಶೀಲಿಸಿ ಅಗತ್ಯ ಬಿದ್ದರೆ ಸೇತುವೆ ನಿರ್ಮಾಣಕ್ಕೆ ಕ್ರಮತೆಗೆದುಕೊಳ್ಳಲಾಗುವುದು.- ಪ್ರಮೋದ್ ಮಧ್ವರಾಜ್, ಶಾಸಕರು, ಉಡುಪಿ.ಚುನಾವಣೆಯ ಸಂದರ್ಭದಲ್ಲಿ ಮತ ಕೇಳ್ಲಿಕ್ಕೆ ಬರುತ್ತಾರೆ. ಅದರ ನಂತರ ಈ ಹಳ್ಳಿಯತ್ತ ಕಾಲು ಇಡಲ್ಲ. ಉಡುಪಿಗೆ ಹೋಗಬೇಕಾದರೆ 18 ಕಿ.ಮೀ. ದೂರ ಸಾಗಬೇಕಾಗುತ್ತದೆ. ಅದಕ್ಕಾಗಿ 30ರೂ. ವ್ಯಯ ಮಾಡಬೇಕು. ಹಲವು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಿ ಅಂತ ಹೇಳುತ್ತಿದ್ದರೂ ಜನಪ್ರತಿ ನಿಧಿಗಳಿಗೆ ಕಿವಿಯೇ ಕೇಳುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News