ಮೂಡುಬಿದಿರೆ : ಚುನಾವಣಾ ವೀಕ್ಷಕರಿಂದ ಪರಿಶೀಲನೆ
ಮೂಡುಬಿದಿರೆ : ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿರುವ ಕೆಎಎಸ್ ಅಧಿಕಾರಿ, ಬೆಂಗಳೂರು ಸಂಜಯ ಗಾಂಧಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್ ಮಂಗಳವಾರ ವಿವಿಧ ಮತಗಟ್ಟುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಗ್ರಾ. ಪಂ ಚುನಾವಣೆಯಲ್ಲಿ ಬೀಗದ ಕೀ ಗೊಂದಲದಿಂದಾಗಿ ಮತಗಟ್ಟೆ ಕೇಂದ್ರ ತೆರೆಯಲು ವಿಳಂಬವಾಗಿರುವ ಬೆಳುವಾಯಿ ಉರ್ದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಡುಮಾರ್ನಾಡು ಗ್ರಾಮ ಪಂಚಾಯತ್‌ಗೆ ತೆರಳಿ ಚುನಾವಣೆಗೆ ಸಂಬಂಧಿಸಿ ಕೈಗೊಂಡ ಪೂರ್ವ ತಯಾರಿಯನ್ನು, ಬೆಳುವಾಯಿ ಮೈನ್ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮತದಾನ ನಡೆಯುವ ಶಾಲೆಗಳಲ್ಲಿ ನೀರು ಮತ್ತಿತರ ಮೂಲಭೂತ ಸೌಲಭ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಸಲಹೆ ನೀಡಿದರು. ಕ್ಷೇತ್ರದಲ್ಲಿರುವ ಸೂಕ್ಷ್ಮ ಮತಗಟ್ಟೆಗಳ ಕುರಿತೂ ಮಾಹಿತಿ ಸಂಗ್ರಹಿಸಿದರು. ಜಿಲ್ಲಾ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಸೋಮಶೇಖರ ಮಯ್ಯ ಉಪಸ್ಥಿತರಿದ್ದರು.