ಜಿ.ಪಂ.,ತಾಪಂ. ಚುನಾವಣೆ: ಕುತ್ತಾರ್ ಮತ್ತು ದೇರಳಕಟ್ಟೆಯಲ್ಲಿ ಪೂಜಾರಿಯವರಿಂದ ಮತಯಾಚನೆ
ಉಳ್ಳಾಲ: ಚುನಾವಣೆಯಲ್ಲಿ ಪಕ್ಷ ವಿಜಯಿಯಾಗಬೇಕಾದಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಮಾಡಿದಷ್ಟು ಸಾಧನೆಯನ್ನು ಬೇರೆ ಪಕ್ಷ ಮಾಡಿಲ್ಲ. ಆದರೆ ಕೆಲವು ಕಡೆ ಸಂಘಟನೆಯ ಕಾರ್ಯವೈಖರಿಯಿಂದ ಬಿಜೆಪಿಯಂತಹ ಪಕ್ಷಗಳು ಜಯಗಳಿಸುತ್ತವೆ ಹೊರತು ಸಾಧನೆಯಿಂದಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದರು.
ಅವರು ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಲಿರುವ ಅಭ್ಯರ್ಥಿಗಳ ಪರವಾಗು ಕುತ್ತಾರ್ ಮತ್ತು ದೇರಳಕಟ್ಟೆಯಲ್ಲಿ ಮಂಗಳವಾರ ಮತಯಾಚನೆ ಮಾಡಿದ ಸಂದರ್ಭ ಮಾತನಾಡಿದರು.
ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪಟಾಕಿ ಬಿಡುವ ಪರಿಸ್ಥಿತಿಯಲ್ಲಿ ಯಾವ ಪಕ್ಷದವರೂ ಇಲ್ಲ. ಬಿಜೆಪಿಗೆ ಎರಡು ಹಿಂದೆ ಇದ್ದ ಸ್ಥಾನಗಳು ಸಿಕ್ಕಿದೆ. ಕಾಂಗ್ರೆಸ್‌ಗೂ ಅದೇ ಸಿಕ್ಕಿದೆ. ದಿಕ್ಸೂಚಿ ವಾತಾವರಣ ಕಾಣಿಸುತ್ತದೆ. ವಿಧಾನಸಭೆಯಲ್ಲಿ ಅದೇ ಕಾಂಗ್ರೆಸ್‌ನ ಸಂಖ್ಯೆ ಅಷ್ಟೇ ಇದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವೇ ಬರುತ್ತದೆ. ಇದು ಸ್ಪಷ್ಟ. ಮುಝಾಫರನಗರದಲ್ಲಿ ಬಿಜೆಪಿ ಜಯಗಳಿಸಿದ್ದು ಅವರು ಮಾಡಿದ ಸಾಧನೆಯಿಂದಲ್ಲ. ಇಲ್ಲಿ ಸಂಘಪರಿವಾರ ಚುನಾವಣೆ ಮೊದಲು ಗಲಾಟೆ ಮಾಡಿದ್ದಾರೆ. ಮತಾಂಧತೆಯನ್ನು ಸೃಷ್ಟಿಸಿಬಿಟ್ಟಿದ್ದಾರೆ. ಸಂಘಪರಿವಾರ ಮಾಡಿದ ಕೋಮು ಸಂಘರ್ಷದ ಫಲವಾಗಿ ಬಿಜೆಪಿ ಜಯ ಸಾಧಿಸಿದೆ. ಬಿಜೆಪಿ ಪ್ರತ್ಯೇಕ ರಾಜ್ಯ , ಸ್ವಾಯತ್ತತ್ತೆ, ಸ್ವಾತಂತ್ರ್ಯವನ್ನು ಬಯಸಿದ ಪಿಡಿಪಿ ಪಕ್ಷವನ್ನು ಕೈಜೋಡಿಸುವ ಮೂಲಕ ದೇಶದ ಕಾನೂನು ಮುರಿದು ಆಡಳಿತ ನಡೆಸುತ್ತಿದೆ. ಇದೇ ರೀತಿಯಲ್ಲಿ ಮುಂದುವರಿದಲ್ಲಿ ಬಿಜೆಪಿ ಸ್ಥಿತಿ ಅಧೋಗತಿಯಾಗಲಿದೆ ಎಂದರು. ಈ ಸಂದರ್ಭ ಆರೋಗ್ಯ ಸಚಿವ ಯು.ಟಿ.ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಅಭ್ಯರ್ಥಿ ಲಕ್ಷ್ಮೀ ಪೂಜಾರಿ, ಕಳ್ಳಿಗೆ ತಾರನಾಥ ಶೆಟ್ಟಿ, ತಾ.ಪಂ. ಸದಸ್ಯ ಮುಸ್ತಫ ಪಾವೂರು, ಮಾಜಿ ತಾ.ಪಂ. ಸದಸ್ಯ ಇಬ್ರಾಹಿಂ, ಕಾಂಗ್ರೆಸ್ ವಕ್ತಾರ ಟಿ.ಕೆ.ಸುಧೀರ್, ಮನಪಾ ಮಾಜಿ ಮೇಯರ್, ಮಹಾಬಲ ಮಾರ್ಲ, ಪುರಂದರದಾಸ್, ಬೆಳ್ಮ ಗ್ರಾ.ಪಂ. ಅಧ್ಯಕ್ಷ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಸತ್ತಾರ್, ಸದಸ್ಯರಾದ ಕಬೀರ್ ಡಿ. ದೇರಳಕಟ್ಟೆ, ಅಬ್ದುಲ್ ರಝಾಕ್, ಯೂಸುಫ್ ಬಾವ,ಅಬ್ದುಲ್ಲ, ಕೊಣಾಜೆ ಜಿ.ಪಂ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಶೀದ ಬಾನು, ಉಳ್ಳಾಲ ನಗರಸಭೆಯ ಸದಸ್ಯ ದಿನೇಶ್ ರೈ, ಅರುಣ್ ಕುವೆಲ್ಲೋ, ರವಿರಾಜ್ ಶೆಟ್ಟಿ, ಕಮಲಾಕ್ಷ ಸಾಲ್ಯಾನ್, ನೀರಜ್ ಪಾಲ್, ಸುಹಾಸಿನಿ ಬಬ್ಬುಕಟ್ಟೆ, ಬಾಝಿಲ್ ಡಿಸೋಜಾ ಸುದರ್ಶನ್ ಶೆಟ್ಟಿ, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ, ಡೆನಿಸ್ ಡಿಸೋಜಾ, ಝಕರಿಯಾ ಮಲಾರ್, ಸಲೀಂ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಿಪಿಎಂ ಅಭ್ಯರ್ಥಿಯಲ್ಲೇ ಮತಯಾಚಿಸಿದ ಪೂಜಾರಿ
ಮುನ್ನೂರು ತಾಲೂಕು ಪಂಚಾಯಿತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಪಿಎಂ ಅಭ್ಯರ್ಥಿಯಲ್ಲೇ ತಿಳಿಯದೆ ಮತಯಾಚಿಸಿದ ಪೂಜಾರಿ ಬಳಿಕ ತಬ್ಬಿಬ್ಬಾದರು. ಕುತ್ತಾರು ಜಂಕ್ಷನ್ನಿನ ಅಂಗಡಿ ಮಾಲೀಕರಲ್ಲಿ ತಯಾಚಿಸುವ ಸಂದರ್ಭ ಅದೇ ಪ್ರದೇಶದಲ್ಲಿ ಸಿಪಿಎಂ ಅಭ್ಯರ್ಥಿ ಹಾಗೂ ಹಾಲಿ ಮುನ್ನೂರು ಪಂಚಾಯಿತಿ ಸದಸ್ಯೆ ಶಶಿಕಲಾ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಪೂಜಾರಿ ಅವರು ಎದುರಾದಾಗ ಶಶಿಕಲಾ ಅವರ ಕೈಗೂ ಭಿತ್ತಿಪತ್ರವನ್ನು ನೀಡಿ ‘ ಬಡವರ ಪಾಲಿನ ಪಕ್ಷ ಕಾಂಗ್ರೆಸ್, ಅದನ್ನು ಗೆಲ್ಲಿಸಿದರೆ ಮಾತ್ರ ನೀವು ಶಾಂತಿಯಿಂದ ಬದುಕಲು ಸಾಧ್ಯ. ಹಾಗೆ ಮಾತನ್ನು ಮುಂದುವರಿಸುತ್ತಿದ್ದಂತೆ ಶಶಿಕಲಾ ಅವರು ಅಭ್ಯರ್ಥಿ ಎಂದು ಹೇಳಲು ಮುಂದಾಗುವಾಗ ‘ಒಮ್ಮೆ ನಿಲ್ಲಿ’ ಎಂದು ಮಾತನ್ನು ನಿಲ್ಲಿಸುತ್ತಿದ್ದ ಪೂಜಾರಿಯವರು ಕಡೆಯವರೆಗೂ ಪಕ್ಷದ ಕುರಿತು ಮಾತನ್ನು ಮುಂದುವರಿಸುತ್ತಲೇ ಇದ್ದರು. ಕೊನೆಯ ಘಳಿಗೆಯಲ್ಲಿ ಪೂಜಾರಿಯವರ ಹಿಂದೆ ಇದ್ದ ಕಾರ್ಯಕರ್ತರೊಬ್ಬರು ಅವರು ಸಿಪಿಎಂ ನಿಂದ ತಾ.ಪಂ ಕಣಕ್ಕಿಳಿದಿರುವ ಅಭ್ಯರ್ಥಿ ಎಂದು ಹೇಳುತ್ತಿದ್ದಂತೆ ತಬ್ಬಿಬ್ಬಾಗಿ ಮುಂದೆ ಸಾಗಿದರು.