×
Ad

ಪಾರಾದೀಪ್‌ನ ಅಂಗವಿಕಲ ಮಕ್ಕಳಿಗೆ ಪ್ರಧಾನಿಯಿಂದ ನೆರವು

Update: 2016-02-16 23:37 IST

ಕೇಂದ್ರಪಾರ (ಒಡಿಶಾ), ಫೆ.16: ಪಿಂಕಿ ಪರಮಾಣಿಕ್ ಎಂಬ 8ರ ಹರೆಯದ ಬಾಲೆಗೆ ಇದೊಂದು ಜೀವ ಮಾನದ ಅನುಭವ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಳೆದ ಅಮೂಲ್ಯ ಸಮಯ ಆಕೆಯ ನೆನಪಿನಂಗಳದಲ್ಲಿ ಆಳವಾಗಿ ಉಳಿಯಲಿದೆ.

ಅಂಗವಿಕಲೆಯಾಗಿರುವ ಪಿಂಕಿ, ಹಾಗೂ ಪಾರಾದೀಪ್‌ನ ಇನ್ನಿಬ್ಬರು ಅಂಗವಿಕಲರು ಮಕ್ಕಳು, ಪ್ರಧಾನಿಯಿಂದ ಸಹಾಯ ಹಾಗೂ ಸಾಧನಗಳನ್ನು ಪಡೆಯುವ ಗೌರವಕ್ಕೆ ಪಾತ್ರರಾಗಿದ್ದರು. ಫೆ.7ರಂದು ತೈಲ ಸಂಸ್ಕರಣಾಗಾರವೊಂದರ ಉದ್ಘಾಟನೆಯಲ್ಲಿ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ, ಮಕ್ಕಳಿಗೆ ಇವುಗಳನ್ನು ನೀಡಿದ್ದರು.
ಪಾರಾದೀಪ್‌ನ ಕೊಲಾಡಿಯಾ ಗ್ರಾಮದ 3ನೆ ತರಗತಿಯ ವಿದ್ಯಾರ್ಥಿನಿ ಪಿಂಕಿ, ಊರುಗೋಲಿನ ನೆರವಿನಲ್ಲಿ ವೇದಿಕೆಯೇರಿದಾಗ, ಅಲ್ಲಿ ಸೇರಿದ್ದವರು ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.
''ನೀನು ಯಾವ ತರಗತಿಯಲ್ಲಿ ಓದುತ್ತಿ? ಜೀವನದಲ್ಲಿ ಮುಂದಿನ ಗುರಿ ಏನು?'' ಎಂಬ ಪ್ರಧಾನಿಯ ಸಮಾಧಾನಕರ ಮಾತುಗಳು, ಪಾರಾದೀಪದ ಪುಟ್ಟ ಹುಡುಗಿಯ ಕಿವಿಗಳಲ್ಲಿ, ಮೋದಿಯವರಿಗೆ ದೃಢವಾದ ಹಸ್ತಲಾಘವ ನೀಡಿದ ಒಂದು ವಾರದ ಬಳಿಕವೂ ಅನುರಣಿಸುತ್ತಿವೆ.
ಸಮಾರಂಭ ಕಂಡು ತನಗೆ ಆಶ್ಚರ್ಯವಾಯಿತು. ಅಷ್ಟೊಂದು ಜನ ಸಂದಣಿಯನ್ನು ತಾನು ಹಿಂದೆಂದೂ ಕಂಡಿರಲಿಲ್ಲ. ಮೋದಿ ಮಾವ ಏನು ಕೇಳಿದರೆಂಬುದನ್ನು ಅರ್ಥೈಸಿಕೊಳ್ಳಲು ತನ್ನಿಂದ ಸಾಧ್ಯವಾಗಿಲ್ಲ. ವೇದಿಕೆಯ ಮೇಲಿದ್ದವರು ತನಗೆ ನೆರವಾಗಿ , ಉತ್ತರಿಸುವಂತೆ ಪ್ರಚೋದಿಸಿದರು. ತಾನು ವೈದ್ಯಯಾಗುವೆನೆಂದು ಹೇಳಿದೆ. ಮೋದೀಜಿ, ತನ್ನ ಬೆನ್ನು ತಟ್ಟಿದರೆಂದು ಪಿಂಕಿ ನೆನಪಿಸಿಕೊಂಡಿದ್ದಾಳೆ.
ತನ್ನ ಮಗುವಿಗೆ ಮೀನಖಂಡದಲ್ಲಿ ಮಾಂಸ ಖಂಡದ ತೊಂದರೆಯಿದೆ. ಅವಳು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದಾಳೆ. ಈ ತೊಂದರೆಯ ಹೊರತಾಗಿಯೂ ಅವಳು ತನ್ನ ಶಿಕ್ಷಣದಲ್ಲಿ ಶ್ರದ್ಧೆಯಿರಿಸಿದ್ದಾಳೆ. ಪ್ರಧಾನಿ ಆಕೆಗೆ ಫಿಸಿಯೊಥೆರೆಪಿ ಎಂಎಸ್‌ಐಇಡಿ ಕಿಟ್ ನೀಡಿದ ಬಳಿಕ ಆಕೆ ರೋಮಾಂಚಿತಳಾದಳು ಇದು ಆಕೆಗೆ ಆತ್ಮವಿಶ್ವಾಸ ತುಂಬಿದೆಯೆಂದು ಪಿಂಕಿಯ ತಂದೆ ಪ್ರದೀಪ್ತ ಪರಮಾಣಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News