ಬೇಹುಗಾರಿಕೆ ಭಾರತೀಯನಿಗೆ ಪಾಕಿಸ್ತಾನದಲ್ಲಿ ಮೂರು ವರ್ಷ ಜೈಲು
ಹೊಸದಿಲ್ಲಿ, ಫೆ.16: ಪಾಕಿಸ್ತಾನದಲ್ಲಿ ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮುಂಬೈ ಮೂಲದ ಯುವ ಇಂಜಿನಿಯರ್ ಹಮೀದ್ ನೇಹಲ್ ಅನ್ಸಾರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವೊಂದು 'ಬೇಹುಗಾರಿಕೆ' ನಡೆಸಿದ್ದಕ್ಕಾಗಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆಯೆಂದು ಪಾಕಿಸ್ತಾನದ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ಕೋಹತ್ ಮೂಲದ ಯುವತಿಯೊಂದಿಗೆ ಪೇಸ್ಬುಕ್ ಮೂಲಕ ಗೆಳೆತನ ಸಂಪಾದಿಸಿದ್ದ ಅನ್ಸಾರಿ ಆಕೆಯನ್ನು ಭೇಟಿಯಾಗಲು ಅಪ್ಘಾನಿಸ್ತಾನದ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ. ನವೆಂಬರ್ 12, 2012ರಂದು ಪಾಕಿಸ್ತಾನದ ಪೊಲೀಸರು ಹಾಗೂ ಗುಪ್ತಚರ ಅಧಿಕಾರಿಗಳು ಆತನನ್ನು ಖೈಬರ್-ಪಖ್ತುಂಖ್ವ ಪ್ರಾಂತ್ಯದಲ್ಲಿರುವ ಕೋಹಟ್ ನಗರದ ಹೊಟೇಲ್ ಒಂದರಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದರು.
ಅನ್ಸಾರಿ ತಾನು 'ಬೇಹುಗಾರಿಕೆ' ನಡೆಸಿದ್ದನ್ನು ಒಪ್ಪಿಕೊಂಡಿದ್ದರಿಂದ ಪೇಶಾವರ ಮಿಲಿಟರಿ ನ್ಯಾಯಾಲಯ ಆತನಿಗೆ ಜೈಲು ಶಿಕ್ಷೆ ವಿಧಿಸಿದೆ. ಎಂದು ಸಮಾ ಟಿವಿ ವರದಿ ಮಾಡಿದೆ.
ಅನ್ಸಾರಿಯನ್ನು ಬಂಧಿಸಿದ ಸಮಯದಲ್ಲಿ ಆತನಿಂದ ಕೆಲವು 'ಸೂಕ್ಷ್ಮನೆಲೆ'ಗಳ ನಕ್ಷೆಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಕೆಲವು ಮೂಲಗಳ ಹೇಳಿಕೆಯ ಅಧಾರದಲ್ಲಿ ಸಮಾ ಟಿವಿ ತನ್ನ ವರದಿಯಲ್ಲಿ ತಿಳಿಸಿದೆ.
ಅನ್ಸಾರಿಯ ಹೆತ್ತವರು ಪ್ರಸಕ್ತ ನವದೆಹಲಿಯಲ್ಲಿದ್ದು ಆತನ ಬಿಡುಗಡೆಗೆ ಪ್ರಯತ್ನಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ತಮ್ಮ ಮಗ ಯವುದೇ ಕ್ರಿಮಿನಲ್ ಅಥವಾ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲವೆಂಬುದು ಅವರ ವಾದವಾಗಿದೆ.
ಇತ್ತೀಚೆಗೆ ಪಾಕಿಸ್ತಾನದ ಮಿಲಿಟರಿ ಅನ್ಸಾರಿ ತನ್ನ ವಶದಲ್ಲಿದ್ದಾನೆಂದು ಪೇಶಾವರ ನ್ಯಾಯಾಲಯದ ಮುಂದೆ ಹೇಳಿತ್ತು.