ನರೇಗಾ ಅನುದಾನಕ್ಕೆ ಎನ್‌ಡಿಎ ಕತ್ತರಿ: ಸಚಿವ ರೈ ಆರೋಪ
ಮಂಗಳೂರು, ಫೆ. 17: ಗ್ರಾಮೀಣ ಜನತೆಗೆ ಅತ್ಯಂತ ಪ್ರಯೋಜನಕಾರಿ ಯೋಜನೆಯಾಗಿ ಪರಿಣಮಿಸಿದ್ದ ಯುಪಿಎ ಸರಕಾರ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅನುದಾನವನ್ನು ಕಡಿತಗೊಳಿಸುವ ಮೂಲಕ ಕೇಂದ್ರದ ಎನ್‌ಡಿಎ ಸರಕಾರ ಗ್ರಾಮೀಣ ಜನರಿಗೆ ಅನ್ಯಾಯ ಮಾಡಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2007ರಿಂದ 2013ರವರೆಗೆ ಆರು ವರ್ಷಗಳಲ್ಲಿ ಯುಪಿಎ ಸರಕಾರ ದ.ಕ. ಜಿಲ್ಲೆಗೆ ನರೇಗಾ ಯೋಜನೆಯಡಿ 63 ಕೋಟಿ ರೂ. 77 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರೆ, ಕಳೆದ ಎರಡು ವರ್ಷಗಳಲ್ಲಿ ಎನ್‌ಡಿಎ ಸರಕಾರ ಬಿಡುಗಡೆಗೊಳಿಸಿರುವುದು ಕೇವಲ 3 ಕೋಟಿ 49 ಲಕ್ಷ ರೂ.ಗಳು ಮಾತ್ರ. ಇದು ಬಿಜೆಪಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಬಗೆಗಿನ ಕಾಳಜಿ, ಆಸಕ್ತಿಯನ್ನು ತೋರ್ಪಡಿಸಿದೆ ಎಂದು ಹೇಳಿದರು.
ಮಹಾತ್ವಾಕಾಂಕ್ಷೆಯ ಯೋಜನೆಗೆ ತಾರತಮ್ಯ ಎಸಗುವ ಮೂಲಕ ಬಿಜೆಪಿಯು ಜಿ.ಪಂ. ಅಧಿಕಾರಾರವಧಿಯಲ್ಲಿ ಅಭಿವೃದ್ಧಿ ಶೂನ್ಯ ಎಂದು ಟೀಕಿಸಿದ ಅವರು, ಯುಪಿಎ ಆಡಳಿತಾವಧಿಯಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್‌ಗೆ 128 ಡಾಲರ್ ಆಗಿದ್ದರೆ, ಪ್ರಸ್ತುತ 28 ಡಾಲರ್‌ಗೆ ಇಳಿದಿದ್ದರೂ ಕೂಡಾ ಇಳಿಕೆಯಾಗಿದೆ. ಆದರೆ ಇಳಿಕೆಯಾದ ಅನುಪಾತಕ್ಕನುಗುಣವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡಿಲ್ಲ ಎಂದರು.
ಭಾರತೀಯರು ವಿದೇಶದಲ್ಲಿ ಬ್ಯಾಂಕ್‌ನಲ್ಲಿರಿಸಿದ ಕಪ್ಪು ಹಣವನ್ನು ವಾಪಾಸು ತರಲಾಗುವುದು ಎಂಬುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಈವರೆಗೆ ಕಪ್ಪು ಹಣವನ್ನು ತರುವ ಪ್ರಯತ್ನ ಮಾಡಿಲ್ಲ. ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ತಪ್ಪು ಆಮದು ನೀತಿಯಿಂದಾಗಿ ರಬ್ಬರ್ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸಚಿವ ರೈ ಆರೋಪಿಸಿದರು.
1973-74ರಲ್ಲಿ ಪಂಚಾಯತ್ ರಾಜ್ ವಿಧೇಯಕಕ್ಕೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಲು ಕಾಂಗ್ರೆಸ್ ಸರಕಾರ ಮುಂದಾದಾಗ ಬಿಜೆಪಿ ಪ್ರಬಲವಾಗಿ ವಿರೋಧಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿರುವುದನ್ನು ಪ್ರದರ್ಶಿಸಿತ್ತು. ಇದೀಗ ಹಿರೇಬಂಡಾಡಿಯಲ್ಲಿ ಕಾರಣವೇ ಇಲ್ಲದೆ ಪಂಚಾಯತನ್ನು ಬಿಜೆಪಿ ಬರ್ಕಾಸ್ತು ಮಾಡಿ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಕಡೆಗಣಿಸಿದೆ. ಕುಮ್ಕಿ ಹಕ್ಕಿನ ಕುರಿತಾತ ಕಾನೂನು ತೊಡಕನ್ನು ನಿವಾರಿಸಿ ಕುಮ್ಕಿದಾರರಿಗೆ ರಾಜ್ಯ ಸರಕಾರ ಅನುಕೂಲ ಮಾಡಲಿದೆ ಎಂದು ಸಚಿವ ರೈ ಹೇಳಿದರು.
ಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಸದಾಶಿವ ಉಳ್ಳಾಲ್, ಶಶಿಧರ ಹೆಗ್ಡೆ, ಮಿಥುನ್ ರೈ, ಸುರೇಶ್ ಬಳ್ಳಾಲ್, ಬಿ.ಎಚ್. ಖಾದರ್, ಅಶ್ರಫ್ ಕೆ., ನವೀನ್ ಡಿಸೋಜಾ, ಅರ್ಶದ್ ವರ್ಕಾಡಿ, ಸಂತೋಷ್ ಶೆಟ್ಟಿ, ಬಿಲಾಲ್ ಮೊಯ್ದಿನ್, ಅಶೋಕ್ ಡಿ.ಕೆ., ಮೆರಿಲ್ ರೇಗೋ, ನಝೀರ್ ಬಜಾಲ್ ಉಪಸ್ಥಿತರಿದ್ದರು.