ಆರೋಪಿಗಳಿಗಾಗಿ ವಿವಿಧ ರಾಜ್ಯಗಳಲ್ಲಿ ದಿಲ್ಲಿ ಪೊಲೀಸರ ಶೋಧ
ಹೊಸದಿಲ್ಲಿ, ಫೆ.17: ದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿವಿಯಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸಿದ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ನೆರನಿನಿಂದ ದಿಲ್ಲಿ-ಎನ್‌ಸಿಆರ‍್, ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ , ಕೇರಳ, ಉತ್ತರಪ್ರದೇಶ ಮತ್ತು ಜಮ್ಮು -ಕಾಶ್ಮೀರ ರಾಜ್ಯಗಳಲ್ಲಿ ದಾಳಿ ನಡೆಸಿ ಡಿಎಸ್‌ಯು ಸದಸ್ಯರಿಗಾಗಿ ಶೋಧ ನಡೆಸಿದ್ದಾರೆ.
ಜೆಎನ್ ವಿವಿಯಲ್ಲಿ ದೇಶದ್ರೋಹಿ ಘೋಷಣೆ ಕೂಗಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿರುವ ಉಮರ್ ಖಾಲಿದ್, ಅನಿರ್‌ಭಾನ್ ಭಟ್ಟಾಚಾರ್ಯ, ರಿಯಾಝುಲ್ ಹಕ್ ಮತ್ತು ರುಬೀನಾ ಸೈಫೆ ಎಲ್ಲರೂ ಡಿಎಸ್‌ಯು ಸದಸ್ಯರೆನ್ನಲಾಗಿದೆ. ಇವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಅಫ್ಝಲ್ ಗುರವಿಗೆ ಮರಣದಂಡನೆ ವಿಧಿಸಿರುವುದನ್ನು ವಿರೋಧಿಸಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ವಿವರ ವೀಡಿಯೋ ದಾಖಲೆಯ ಮೂಲಕ ಪೊಲೀಸರಿಗೆ ಲಭಿಸಿದೆ. ತಲೆಮರೆಸಿಕೊಂಡಿರುವ ವಿದ್ಯಾರ್ಥಿಗಳ ಪತ್ತೆಗೆ ಆಯಾ ರಾಜ್ಯಗಳ ಪೊಲೀಸರ ನೆರವನ್ನು ಪಡೆದಿರುವ ದಿಲ್ಲಿ ಪೊಲೀಸರು , ಆರೋಪಿಗಳ ಮನೆ ಮಂದಿ, ಸ್ನೇಹಿತರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸುತ್ತಿದ್ದಾರೆ.
ದಿಲ್ಲಿ ಪೊಲೀಸ್ ಆಯುಕ್ತರಾದ ಬಿ.ಎಸ್.ಬಸ್ಸಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಚೇರಿಗೆ ತೆರಳಿ ಸಚಿವ ಸಂಪುಟಕ್ಕೆ ದಿಲ್ಲಿ ಜೆಎನ್ ವಿವಿಯ ಪ್ರಸ್ತುತ ವಾತಾವರಣದ ಬಗ್ಗೆ ಮಾಹಿತಿ ನೀಡಿದರು.