×
Ad

ದ್ವಿತೀಯ ಹಂತದ ಚುನಾವಣೆ, ಕರಾವಳಿ ಜಿಲ್ಲೆಯಲ್ಲಿ ಸಮರ್ಪಕ ಬಂದೋಬಸ್ತ್: ಎಡಿಜಿಪಿ ಅಲೋಕ್ ಮೋಹನ್

Update: 2016-02-17 16:46 IST

ಮಂಗಳೂರು, ಫೆ.17: ಇದೇ ತಿಂಗಳ 20ರಂದು ನಡೆಯಲಿರುವ ದ್ವಿತೀಯ ಹಂತದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಪಶ್ಚಿಮ ವಲಯ ವ್ಯಾಪ್ತಿಯ ಕರಾವಳಿ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ ಹಾಗೂ ದ.ಕ.ಗಳಲ್ಲಿ ಸಮರ್ಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಮೋಹನ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ದ.ಕ. ಜಿಲ್ಲೆಯ 824 ಮತಗಟ್ಟೆಗಳಲ್ಲಿ 103 ಅತೀ ಸೂಕ್ಷ್ಮ, 289 ಸೂಕ್ಷ್ಮ ಹಾಗೂ 381 ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಉಡುಪಿಯಲ್ಲಿ 936ರಲ್ಲಿ 51 ಅತಿ ಸೂಕ್ಷ್ಮ, 142 ಸೂಕ್ಷ್ಮ ಹಾಗೂ 689 ಸಾಮಾನ್ಯ ಮತಗಟ್ಟೆಗಳಾಗಿವೆ. ಚಿಕ್ಕಮಗಳೂರಿನ 977 ಮತಗಟ್ಟೆಗಳಲ್ಲಿ 114 ಅತೀ ಸೂಕ್ಷ್ಮ, 301 ಸೂಕ್ಷ್ಮ ಹಾಗೂ 523 ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ ಎಂದು ಅವರು ಹೇಳಿದರು. ಮಂಗಳೂರು ನಗರ ವ್ಯಾಪ್ತಿಯಲ್ಲಿ 362 ಮತಗಟ್ಟೆಗಳಲ್ಲಿ 42 ಅತೀ ಸೂಕ್ಷ್ಮ, 134 ಸೂಕ್ಷ್ಮ ಹಾಗೂ 186 ಸಾಮಾನ್ಯ ಮತಗಟ್ಟೆಗಳಾಗಿ ಗುರುತಿಸಲಾಗಿದೆ.

ಮೂರು ಜಿಲ್ಲೆಗಳಲ್ಲಿ ಒಟ್ಟು 2500 ಪೊಲೀಸ್ ಸಿಬ್ಬಂದಿಗಳಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ 3000 ಹೆಚ್ಚುವರಿ ಪೊಲೀಸರು, 2000 ಗೃಹ ರಕ್ಷಕರು ಹಾಗೂ ಕೆಎಸ್‌ಆರ್‌ಪಿಯ 25 ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.
ಪತ್ರಿಕಾಗೋಷ್ಠಿಯಲ್ಲಿ ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್, ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ., ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ, ಚಿಕ್ಕಮಗಳೂರು ಎಸ್ಪಿ ಡಾ. ಸಂತೋಷ್ ಬಾಬು ಉಪಸ್ಥಿತರಿದ್ದರು.
ಪಶ್ಚಿಮ ವಲಯದಲ್ಲಿ 154 ನಕ್ಸಲ್ ಪೀಡಿತ ಮತಗಟ್ಟೆಗಳ ಪಶ್ಚಿಮ ವಲಯ ವ್ಯಾಪ್ತಿಯ ದಕ್ಷಿಣ ಕನ್ನಡದಲ್ಲಿ 61, ಉಡುಪಿ 54 ಹಾಗೂ ಚಿಕ್ಕಮಗಳೂರಿನಲ್ಲಿ 39 ನಕ್ಸಲ್ ಪೀಡಿತ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಮೋಹನ್ ತಿಳಿಸಿದರು.
3 ತಿಂಗಳಲ್ಲಿ 16 ಮಂದಿ ಮೇಲೆ ಗೂಂಡಾ ಕಾಯ್ದೆ
ಕಳೆದ ಡಿಸೆಂಬರ್‌ನಿಂದ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ 16 ಮಂದಿ ಮೇಲೆ ಗೂಂಡಾ ಕಾಯ್ದೆ ಹೇರಲಾಗಿದ್ದು, ಅದರಲ್ಲಿ ಮೂರು ಮಂಗಳೂರು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ಸೇರಿದವರಾಗಿದ್ದಾರೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News