×
Ad

ಬಂಟ್ವಾಳ: ತಾಪಂ ಅಭ್ಯರ್ಥಿ ಝಕರಿಯಾ ಮಲಿಕ್ ಕೊಲೆಯತ್ನ ಪ್ರಕರಣ ಹತಾಶ ರಾಜಕೀಯ ಪಕ್ಷಗಳಿಂದ ಗೂಂಡಾಗಿರಿ: ಎಸ್‌ಡಿಪಿಐ ಆರೋಪ

Update: 2016-02-17 16:55 IST

ಬಂಟ್ವಾಳ: ಸಜಿಪಮೂಡ ತಾಲೂಕು ಪಂಚಾಯಾತ್ ಎಸ್‌ಡಿಪಿಐ ಅಭ್ಯರ್ಥಿ ಝಕರಿಯಾ ಮಲಿಕ್ ಅವರ ಕೊಲೆಯತ್ನ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ, ಈ ಘಟನೆಗೆ ಸಂಬಂಧಿಸಿ ನೈಜ್ಯ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ಬುಧವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ತಲಮಟ್ಟದಲ್ಲಿ ಎಸ್‌ಡಿಪಿಐ ಪಕ್ಷದ ಬೆಳವಣಿಗೆಯನ್ನು ಕಂಡು ಇತರ ರಾಜಕೀಯ ಪಕ್ಷಗಳ ನಾಯಕರು ಹತಾಶೆಗೊಂಡಿದ್ದಾರೆ.

ಹತಾಶೆಗೊಂಡಿರುವ ರಾಜಕೀಯ ನಾಯಕರ ಕುಮ್ಮಕ್ಕಿನಂತೆಯೇ ಝಕರಿಯಾ ಮಲಿಕ್ ಕೊಲೆಯತ್ನ ನಡೆದಿದೆ ಎಂಬ ಅನುಮಾನಕ್ಕೆ ಪಕ್ಷ ಬಂದಿದೆ ಎಂದು ತಿಳಿಸಿದರು. ಝಕರಿಯಾ ಮಲಿಕ್ ಕೊಲೆಯತ್ನ ನಡೆದ ಪ್ರದೇಶದಲ್ಲಿಯೇ ಇತ್ತೀಚೆಗೆ ಕೂಲಿ ಕಾರ್ಮಿಕ ಸಜಿಪ ನಿವಾಸಿ ನಾಸಿರ್ ಎಂಬವರನ್ನು ಹತ್ಯೆ ಮಾಡಲಾಗಿತ್ತು. ನಾಸಿರ್ ಸಜಿಪ ಹಾಗೂ ನಾವೂರು ಹರೀಶ್ ಪೂಜಾರಿ ಹತ್ಯೆಗೆ ಸಂಬಂಧಿಸಿ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಿದ್ದಾರೆ. ಮಲಿಕ್ ಕೊಲೆ ಯತ್ನ ಕೃತ್ಯಕ್ಕೆ ಸಂಬಂಧಿಸಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಂಟ್ವಾಳ ನಗರ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ವಿಶ್ವಾಸವಿದೆ.

ಚುನಾವಣಾ ಪ್ರಕ್ರಿಯೆ ಮುಗಿಯುವ ವರೆಗೆ ಕಾಲಾವಕಾಶವನ್ನು ಪೊಲೀಸರು ಕೇಳಿದ್ದು, ಬಳಿಕ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸುವ ಭರವಸೆಯನ್ನು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಬಂಟ್ವಾಳ ತಾಲೂಕಿನ 2 ಜಿಲ್ಲಾ ಪಂಚಾಯತ್ ಹಾಗೂ 7 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಳು ಸ್ಪರ್ಧೆಯಲ್ಲಿದ್ದು, ಪುದು ಹಾಗೂ ಸಜಿಪಮುನ್ನೂರು ಜಿಪಂ ಅಭ್ಯರ್ಥಿಗಳಾದ ರಿಯಾರ್ ಫರಂಗಿಪೇಟೆ ಮತ್ತು ಹಂಝಾ ನಂದಾವರ ಹಾಗೂ 5 ತಾಪಂ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಗೆಲ್ಲುವ ಭರವಸೆ ಇದೆ ಎಂದ ಅವರು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಚುನಾವಣೆ ಪ್ರಚಾರ ನಡೆಸುತ್ತಿದ್ದು, ಎಸ್‌ಡಿಪಿಐ ಸ್ಪರ್ಧಿಸುತ್ತಿರುವ ಎಲ್ಲ ಕ್ಷೇತ್ರಗಳಲ್ಲೂ ಎಸ್‌ಡಿಪಿಐ ಪರ ಅಲೆ ಜೋರಾಗಿದೆ. ಇದರಿಂದ ಹತಾಶೆಗೊಂಡು ಚುನಾವಣೆ ಎದುರಿಸಲು ಸಾಧ್ಯವಾಗದ ಇತರ ರಾಜಕೀಯ ಪಕ್ಷಗಳು ಗೂಂಡಾಗಿರಿ ಕೃತ್ಯಕ್ಕೆ ಇಳಿದಿದೆ ಎಂದು ಆರೋಪಿಸಿದರು. ದುಷ್ಕರ್ಮಿಗಳಿಂದ ಕೊಲೆಯಾದ ನಾಸಿರ್ ಸಜಿಪ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತನಾದ ಹಿನ್ನೆಲೆಯಲ್ಲಿ ತಾನು ಅವರ ಮನೆಗೆ ಭೇಟಿ ನೀಡಿಲ್ಲ ಎಂಬ ಆರೋಗ್ಯ ಸಚಿವ ಯು.ಟಿ.ಖಾದರ್‌ರ ಹೇಳಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಹನೀಫ್ ಖಾನ್, ಯು.ಟಿ.ಖಾದರ್ ಹೇಳಿಕೆಯಿಂದ ಮನನೊಂದು ನಾಸಿರ್‌ರವರ ತಾಯಿ, ತನ್ನ ಮಗ ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತನಾಗಿದ್ದ ಹಾಗೂ ನಮ್ಮನ್ನು ಕಾಂಗ್ರೆಸ್‌ಗೆ ಮತ ಹಾಕಲು ಪ್ರೇರೇಪಿಸುತ್ತಿದ್ದ ಎಂದು ಇತ್ತೀಚೆಗೆ ಸ್ಪಷ್ಟಪಡಿದ್ದಾರೆ. ಇನ್ನು ಆ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಗಾಯಾಳು ಝಕರಿಯಾ ಮಲಿಕ್ ಮಾತನಾಡಿ, ತನಗೆ ಯಾರ ಮೇಲಾಗಲಿ, ತನ್ನ ಮೇಲೆ ಯಾರಿಗಾಗಲೀ ವೈಯಕ್ತಿಕ ದ್ವೇಷ ಇಲ್ಲ.

ಸೋಮವಾರ ರಾತ್ರಿ ಚುನಾವಣಾ ಪ್ರಚಾರ ಕಾರ್ಯ ಮುಗಿಸಿ ಬಂಟ್ವಾಳದಲ್ಲಿರುವ ತನ್ನ ಪತ್ನಿಯ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೋಗೋಡಿ ಬಳಿ ಎರಡು ಬೈಕ್‌ನಲ್ಲಿದ್ದ ನಾಲ್ವರು ಹೆಲ್ಮೆಟ್‌ಧಾರಿಗಳು ನನ್ನ ಬೈಕ್ ನಿಲ್ಲಿಸಿ ನಮಸ್ಕಾರ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಕೂಡಲೇ ವಾಹನವೊಂದು ಸ್ಥಳಕ್ಕೆ ಬಂದಿದ್ದು, ತಕ್ಷಣ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಾನು ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಕೆಲವರಿಂದ ಒತ್ತಾಯಗಳು ಬಂದಿದ್ದವು. ತನಗೆ ದುಷ್ಕರ್ಮಿಗಳ ಪರಿಚಯವಿಲ್ಲ. ಆದ್ದರಿಂದ ದೂರಿನಲ್ಲಿ ಯಾರದ್ದೇ ಹೆಸರು ನೀಡಿಲ್ಲ. ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಲಿಸಲಿದ್ದಾರೆ ಎಂಬ ಭರವಸೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್., ಕಾರ್ಯದರ್ಶಿ ಮುಸ್ತಾಕ್ ತಲಪಾಡಿ, ಪುರಸಭಾ ಸದಸ್ಯರಾದ ಮುನಿಶ್ ಅಲಿ, ಇಕ್ಬಾಲ್ ಐ.ಎಂ.ಆರ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News