×
Ad

ಕಾರ್ಕಳ : ಯರ್ಲಪ್ಪಾಡಿಗೆ ರವಿಶಾಸ್ತ್ರೀ ಭೇಟಿ - ನಾಗನಿಗೆ ಪಂಚಾಮೃತ ಅಭಿಷೇಕ ಮತ್ತು ಆಶ್ಲೇಷ ಬಲಿ

Update: 2016-02-17 17:57 IST
ಕರ್ವಾಲಿಗೆ ಭೇಟಿ ನೀಡಿದ ರವಿಶಾಸ್ತ್ರೀ

ಕಾರ್ಕಳ : ಯರ್ಲಪ್ಪಾಡಿಯಲ್ಲಿರುವ ಕರ್ವಾಲು ವಿಷ್ಣುಮೂರ್ತಿ ದೇವಳಕ್ಕೆ ಮಾಜಿ ಕ್ರಿಕೆಟಿಗೆ ಹಾಗೂ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರೀ ಬುಧವಾರ ಭೇಟಿ ನೀಡಿ ನಾಗನಿಗೆ ಪಂಚಾಮೃತ ಅಭಿಷೇಕ ಮತ್ತು ಆಶ್ಲೇಷ ಬಲಿ ಸೇವೆ ನೀಡಿದ್ದಾರೆ.
ಸತತ ಎಂಟನೇ ವರ್ಷದಿಂದ ಅವರು ಕರ್ವಾಲಿಗೆ ಭೇಟಿ ನೀಡುತ್ತಿದ್ದು, ಸಂಕಲ್ಪಿಸಿದ ಇಷ್ಟಾರ್ಥ ಸಿದ್ದಿಸಿದ ಪ್ರಯುಕ್ತ ವರ್ಷಂಪ್ರತಿ ದೇವಳಕ್ಕಾಗಮಿಸುತ್ತಿದ್ದಾರೆ. ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆಯನ್ನು ಇದೇ ಸಂದರ್ಭ ನೆರವೇರಿಸಿದ್ದಾರೆ.

ಮದುವೆಯಾಗಿ 18 ವರ್ಷಗಳ ಕಾಲ ಮಕ್ಕಳಿಲ್ಲದ ಕಾರಣ, ಜ್ಯೋತಿಷಿ ಬಳಿ ವಿಚಾರಿಸಿದಾಗ ಮೂಲ ನಾಗದೇವರಿಗೆ ತೆರಳಿ ಪೂಜೆ ಸಲ್ಲಿಸಬೇಕು ಎನ್ನುವ ವಿಚಾರ ತಿಳಿದು ಬಂದ ಹಿನ್ನೆಲೆಯಲ್ಲಿ, ರವಿಶಾಸ್ತ್ರೀ ತಮ್ಮ ಪೂರ್ವಿಜರು ನಂಬಿಕೊಂಡ ಮೂಲ ನಾಗ ದೇವರ ನಾಗಬನವಿರುವ ಕರ್ವಾಲುಗೆ ಆಗಮಿಸಿದ್ದರು. ಬಳಿಕ ಇಷ್ಟಾರ್ಥ ಸಿದ್ದಿಗಾಗಿ ಸಂಕಲ್ಪಿಸಿಕೊಂಡಂತೆ, ಹೆಣ್ಣು ಮಗುವನ್ನು ಪಡೆದಿದ್ದರು. ಅದರಂತೆ ಪ್ರತಿ ವರ್ಷ ರವಿಶಾಸ್ರ್ತೀ ಕರ್ವಾಲುಗೆ ಆಗಮಿಸುತ್ತಿದ್ದಾರೆ. ವಿಷ್ಣುಮೂರ್ತಿ ದೇವರ ದರ್ಶನ ಮತ್ತು ನಾಗದೇವರಿಗೆ ಪಂಚಾಮೃತ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ನನಗೆ ಆ ಬಳಿಕ ದಿನಗಳಲ್ಲಿ ಸಾಕಷ್ಟು ಯಶಸ್ಸುಗಳು ಕಂಡಿದ್ದೇನೆ. ಇಲ್ಲಿಗಾಗಮಿಸುವುದು ಎಂದರೆ ನನಗೆ ಅತೀಯಾದ ಸಂತೃಪ್ತಿಯನ್ನೊದಗಿಸುತ್ತದೆ ಎಂದರು ರವಿಶಾಸ್ತ್ರೀ. ಇದೇ ಸಂದರ್ಭ ಕವಾಳು ದೇವಳದ ಆಡಳಿತ ಮೊಕ್ತೇಸರ ಸೋಮಶೇಖರ್‌ರಾವ್, ಪತ್ರಕರ್ತ ಮನೋಹರ್‌ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News