ಪುತ್ತೂರು: ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಬಿಗಿ ಭದ್ರತೆ: 252 ಪೊಲೀಸ್ ಮತ್ತು ಗೃಹ ರಕ್ಷಕ ದಳ ಸಿಬಂದಿ ಆಗಮನ
ಪುತ್ತೂರು: ಫೆ.20ರಂದು ನಡೆಯಲಿರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ 193 ಮತಗಟ್ಟೆಗಳಲ್ಲಿ ಭದ್ರತೆ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿಗೆ ಒಟ್ಟು 252 ಮಂದಿ ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬಂದಿ ಆಗಮಿಸಲಿದ್ದಾರೆ.
ಸಿಬಂದಿ ವಿವರ: 138 ಸಿವಿಲ್ ಹೆಡ್‌ಕಾನ್‌ಸ್ಟೇಬಲ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್‌ಗಳು, 114 ಗೃಹ ರಕ್ಷಕ ದಳದ ಸಿಬಂದಿ ಆಗಮಿಸಲಿದ್ದಾರೆ. ಪುತ್ತೂರು ಎ.ಎಸ್ಪಿ.ಯವರು ಒಟ್ಟು ಬಂದೋಬಸ್ತ್‌ನ ನೇತೃತ್ವ ವಹಿಸಲಿದ್ದಾರೆ. ಹೊರಗಡೆಯಿಂದ ಮೂವರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ ಐವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 7 ಮಂದಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳು ಆಗಮಿಸಲಿದ್ದಾರೆ. ಮೀಸಲು ಪಡೆ: ಕರ್ನಾಟಕ ರಾಜ್ಯ ಮೀಸಲು ಪಡೆಯ 5 ಬಸ್ಸುಗಳು ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಲ್ಕು ಬಸ್ಸುಗಳು ಬಂದೋಬಸ್ತ್ ನಿರ್ವಹಣೆಗಾಗಿ ಪುತ್ತೂರಿಗೆ ಬುಧವಾರ ರಾತ್ರಿ ಆಗಮಿಸಲಿವೆ. ಪೊಲೀಸ್ ಸಿಬಂದಿಗೆ ಉಳಿದುಕೊಳ್ಳಲು ತೆಂಕಿಲ ವಿವೇಕಾನಂದ ಕನ್ನಡ ಶಾಲೆ ಹಾಗೂ ಮೂರು ಸಭಾಭವನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಫೆ. 19 ರಂದು ಬೆಳಗ್ಗೆ ಮತಯಂತ್ರಗಳ ಜತೆಗೆ ಸಂಬಂಧಪಟ್ಟ ಪೊಲೀಸ್ ಸಿಬಂದಿ ಮತಗಟ್ಟೆಗೆ ತೆರಳಲಿದ್ದಾರೆ. ನಕ್ಸಲ್ ಬಾಧಿತ ಮತಗಟ್ಟೆಗಳು: ಪುತ್ತೂರು ತಾಲೂಕಿನ 11 ನಕ್ಸಲ್ ಬಾಧಿತ ಮತಗಟ್ಟೆಗಳಲ್ಲಿ ಸಶಸ್ತ್ರ ಪೊಲೀಸ್ ಸಿಬಂದಿಯನ್ನು ನೇಮಿಸಲಾಗುತ್ತದೆ. ಒಂದೊಂದು ಮತಗಟ್ಟೆಗೆ ಮೂವರು ಸಿಬಂದಿಯನ್ನು ನೇಮಕ ಮಾಡಲಾಗುತ್ತದೆ. ಪೊಲೀಸ್ ಅಧಿಕಾರಿಗಳನ್ನು ಪ್ರತೀ ಸೆಕ್ಟರ್‌ಗೆ ನೇಮಕ ಮಾಡಲಾಗಿದೆ. ಅಲ್ಲದೆ ಪುತ್ತೂರು ನಗರ, ಗ್ರಾಮಾಂತರ, ಉಪ್ಪಿನಂಗಡಿ ಮತ್ತು ಕಡಬಗಳಲ್ಲಿ ಪೊಲೀಸ್ ಕಂಟ್ರೋಲ್ ರೂಂ ಗಳನ್ನು ತೆರೆಯಲಾಗುತ್ತದೆ. ಪುತ್ತೂರು ನಗರದಲ್ಲಿ ಪ್ರಧಾನ ಪೊಲೀಸ್ ಕಂಟ್ರೋಲ್ ರೂಂ ಇರುತ್ತದೆ. ನೋಡೆಲ್ ಅಧಿಕಾರಿ: ಪೊಲೀಸ್ ಬಂದೋಬಸ್ತ್‌ಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಅನಿಲ್ ಎಸ್. ಕುಲಕರ್ಣಿಯವರನ್ನು ನೋಡೆಲ್ ಅಧಿಕಾರಿಯಾಗಿ ಚುನಾವಣಾ ಆಯೋಗ ನೇಮಕಗೊಳಿಸಿದೆ. ಪೊಲೀಸ್ ಕರ್ತವ್ಯ ನಿರ್ವಹಣೆಗಾಗಿ ಇತರ ಇಲಾಖೆಯ ವಾಹನಗಳನ್ನು ಕೂಡ ಚುನಾವಣಾ ಆಯೋಗ ಬಳಸಿಕೊಳ್ಳಲಿದೆ. ಹೊರ ಜಿಲ್ಲೆಗಳಿಂದ ಬಂದ ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬಂದಿಗೆ ಆಹಾರ ವ್ಯವಸ್ಥೆಯನ್ನು ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಮಾಡಲಾಗಿದೆ
.