ಉಪ್ಪಿನಂಗಡಿ : ಪ್ರತ್ಯೇಕ ತುಳು ರಾಜ್ಯಕ್ಕಾಗಿ ಧ್ವಜಾರೋಹಣ: ಹೋರಾಟಗಾರರ ಮೇಲಿನ ಪ್ರಕರಣ ವಜಾ
ಉಪ್ಪಿನಂಗಡಿ: ಕನ್ನಡ ರಾಜ್ಯೋತ್ಸವ ದಿನದಂದು ಪ್ರತ್ಯೇಕ ತುಳು ರಾಜ್ಯಕ್ಕೆ ಆಗ್ರಹಿಸಿ ಧ್ವಜಾರೋಹಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ತುಳು ರಾಜ್ಯ ಹೋರಾಟಗಾರರ ಮೇಲೆ ದಾಖಲಾಗಿದ್ದ ಸಾರ್ವಜನಿಕ ಶಾಂತಿ ಭಂಗ ಪ್ರಕರಣವನ್ನು ಪುತ್ತೂರು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿ ಆದೇಶ ನೀಡಿದೆ. ಇದರಿಂದಾಗಿ ತುಳು ರಾಜ್ಯ ಧ್ವಜ ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಹೋರಾಟಗಾರರ ಮೇಲೆ ದಾಖಲಾದ ಪ್ರಕರಣ ವಜಾಗೊಂಡಂತಾಗಿದೆ.
ತುಳುನಾಡ ಒಕ್ಕೂಟದ ಉಪ್ಪಿನಂಗಡಿ ವಲಯಾಧ್ಯಕ್ಷ ಶೇಖರ ಪೂಜಾರಿ ಗೌಂಡತ್ತಿಗೆ ನೇತೃತ್ವದಲ್ಲಿ ಕಳೆದ ನವೆಂಬರ್ 1ರಂದು ಪ್ರತ್ಯೇಕ ತುಳು ರಾಜ್ಯಕ್ಕೆ ಆಗ್ರಹಿಸಿ ಇಲ್ಲಿನ ಪುಳಿತ್ತಡಿಯಲ್ಲಿ ತುಳು ರಾಜ್ಯಕ್ಕಾಗಿ ಧ್ವಜಾರೋಹಣ ನಡೆಸಲಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಅದರ ತೆರವಿಗೆ ಮುಂದಾದಾಗ ತುಳು ರಾಜ್ಯ ಹೋರಾಟಗಾರರು ಇದಕ್ಕೆ ಪ್ರತಿರೋಧವೊಡ್ಡಿದ್ದರು. ಈ ಸಂದರ್ಭ ಅಲ್ಲಿದ್ದ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯವರೂ ತುಳು ರಾಜ್ಯ ಹೋರಾಟಗಾರರನ್ನು ಬೆಂಬಲಿಸಿ, ಪೊಲೀಸರ ನಡೆಯನ್ನು ವಿರೋಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ತುಳು ರಾಜ್ಯ ಹೋರಾಟಗಾರರಾದ ಶೇಖರ ಪೂಜಾರಿ ಗೌಂಡತ್ತಿಗೆ, ಅನಿಲ್ ದಡ್ಡು, ಸೇಸಪ್ಪ ಗೌಡ, ಕೇಶವ ರಂಗಾಜೆ ಹಾಗೂ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಡಾ. ನಿರಂಜನ್ ರೈ, ರಾಜಗೋಪಾಲ್ ಭಟ್, ಯು.ಜಿ.ರಾಧಾ, ಪ್ರಶಾಂತ್ ಡಿಕೋಸ್ಟಾ ಎಂಬವರ ಮೇಲೆ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕ ಶಾಂತಿ ಭಂಗ ಪ್ರಕರಣ ದಾಖಲಿಸಿದ್ದರು. ಪೊಲೀಸರ ಈ ನಡೆಯನ್ನು ಹೋರಾಟಗಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇವರಲ್ಲಿ ನೇತ್ರಾವತಿ ನದಿ ತಿರುವು ಹೋರಾಟಗಾರರ ಮೇಲಿನ ಪ್ರಕರಣವನ್ನು ನ್ಯಾಯಾಲಯ ಈ ಮೊದಲೇ ವಜಾಗೊಳಿಸಿತ್ತು. ಬಳಿಕ ತುಳು ರಾಜ್ಯ ಹೋರಾಟಗಾರರಾದ ಶೇಖರ ಪೂಜಾರಿ ಗೌಂಡತ್ತಿಗೆ, ಅನಿಲ್ ದಡ್ಡು, ಸೇಸಪ್ಪ ಗೌಡ, ಕೇಶವ ರಂಗಾಜೆ ಅವರ ಮೇಲಿದ್ದ ಪ್ರಕರಣವನ್ನೂ ಕೂಡಾ ವಜಾಗೊಳಿಸಿದೆ. ಇದರಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಹೋರಾಟಗಾರರ ಮೇಲಿದ್ದ ಪ್ರಕರಣವೂ ಖುಲಾಸೆಗೊಂಡಂತಾಗಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಅನಿಲ್ ಕುಮಾರ್ ಉಪ್ಪಿನಂಗಡಿ, ಚೇತನ್ ಕುಮಾರ್, ಸಂದೇಶ್ ನಟ್ಟಿಬೈಲ್ ವಾದಿಸಿದ್ದರು.