ಯುವಕನಿಗೆ ಮೆಣಸಿನ ಹುಡಿ ಎರಚಿ ಹಲ್ಲೆ ನಡೆಸಿದ ಯುವತಿ, ಯುವತಿಯ ಕುಟುಂಬವನ್ನು ಗಡಿಪಾರು ಮಾಡಲು ಗ್ರಾಮಸ್ಥರ ಆಗ್ರಹ
ಮೂಡುಬಿದಿರೆ: ತನ್ನ ದ್ವಿಚಕ್ರದಲ್ಲಿ ಮನೆಯಿಂದ ಆಸ್ಪತ್ರೆಗೆ ಹೋಗುತಿದ್ದ ಯುವಕನೋರ್ವನನ್ನು ಯುವತಿಯೊಬ್ಬಳು ಅಡ್ಡಕಟ್ಟಿ ಮೆಣಸಿನ ಹುಡಿ ಎರಚಿ, ಹಲ್ಲೆ ನಡೆಸಿದ ಘಟನೆ ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಬಡಗ ಮಿಜಾರಿನ ಕೊಪ್ಪದ ಕುಮೇರು ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಕೊಪ್ಪದ ಕುಮೇರ್ ನಿವಾಸಿ ರವಿ ದೇವಾಡಿಗ ಎಂಬವರ ಪುತ್ರಿ ಅಕ್ಷತಾ ಎಂಬಾಕೆಯೇ ಹಲ್ಲೆ ನಡೆಸಿದ ಯುವತಿ. ಸೋಮವಾರ ರಾತ್ರಿ ರವಿ ದೇವಾಡಿಗ ಎಂಬವರಿಂದ ಹಲ್ಲೆಗೊಳಗಾಗಿದ್ದ ದಿನೇಶ್ ಪೂಜಾರಿ ಎಂಬವರೇ ಇದೀಗ ರವಿ ಪೂಜಾರಿಯ ಪುತ್ರಿಯಿಂದ ಹಲ್ಲೆಗೊಳಗಿರುವ ಯುವಕ. ಭಾನುವಾರ ರವಿ ದೇವಾಡಿಗ ಹಾಗೂ ಅವರ ಪುತ್ರಿಯರು ದಿನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದು, ದಿನೇಶ್ ಹಾಗೂ ಸ್ಥಳೀಯರು ಮಂಗಳವಾರ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಲ್ಲೆ ಪ್ರಕರಣದಲ್ಲಿ ಗಾಯಗೊಳಗಾಗಿದ್ದ ದಿನೇಶ್ ಅವರು ಬುಧವಾರದಂದು ಮೂಡುಬಿದಿರೆ ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ, ರವಿ ದೇವಾಡಿಗನ ಪುತ್ರಿಯರು ದ್ವಿಚಕ್ರ ವಾಹನ ಅಡಗಟ್ಟಿ ಮತ್ತೆ ಹಲ್ಲೆ ನಡೆಸಿದ್ದಲ್ಲದೆ, ಬಳಿಕ ಮೆಣಸಿನ ಹುಡಿ ಎರಚಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಧ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ, ರವಿ ದೇವಾಡಿಗ ಹಾಗೂ ಆತನ ಪುತ್ರಿಯರು ಅಮಾಯಕರ ಮೇಲೆ ಹಲ್ಲೆ ನಡೆಸುವುದು, ಯುವಕರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು, ಅವರನ್ನು ಬಡಗಮಿಜಾರು ಗ್ರಾಮದಿಂದ ಗಡಿಪಾರು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ರವಿ ದೇವಾಡಿಗ ಕುಟುಂಬವು ಈ ಹಿಂದೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು-ಸುಭಾಸ್‌ನಗರದಲ್ಲಿ ವಾಸಿಸುತ್ತಿತ್ತು ಈ ಸಂದರ್ಭದಲ್ಲಿ ಕೂಡ ಈ ಕುಟುಂಬ ಇದೇ ರೀತಿ ಅವಾಂತರ ಮಾಡಿ, ಸ್ಥಳೀಯ ಯುವಕರ ಮೇಲೆ ಸುಳ್ಳು ಆರೋಪ ಮಾಡಿರುವ ಕೇಸು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜಾರಿಗೊಂಡ ಮಾನವ ಹಕ್ಕು ಆಯೋಗ
ಕಳೆದ ವರ್ಷ ಸುಭಾಷ್‌ನಗರದಲ್ಲಿ ಇದೇ ರೀತಿ ಯುವಕರ ಮೇಲೆ ಹಲ್ಲೆ ನಡೆಸಿದಾಗ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ಅವರು ವಿಚಾರಣೆಗೆ ತೆರಳಿದ್ದರು. ಆಗ ಪೊಲೀಸರು ತಮ್ಮ ಮೇಲೆ ಕೈ ಮಾಡಲು ಬಂದಿದ್ದಾರೆಂದು ಆರೋಪಿಸಿ ಮಾನವ ಹಕ್ಕು ಆಯೋಗಕ್ಕೆ ಮತ್ತು ಪೊಲೀಸ್ ಮೇಲಾಧಿಕಾರಿಗಳಿಗೆ ಯುವತಿಯರು ದೂರು ನೀಡಿದ್ದರು. ಯುವತಿಯರ ದೂರನ್ನು ಕೈಗೆತ್ತಿಕೊಂಡಿದ್ದ ಮಾನವ ಹಕ್ಕು ಆಯೋಗವು ಪೊಲೀಸ್ ಅಧಿಕಾರಿಗಳದ್ದೇ ತಪ್ಪೆಂದು ವಾದಿಸಿದ್ದರಲ್ಲದೆ, ಕ್ಷಮೆಯಾಚಿಸುವಂತೆ ಸೂಚಿಸಿದ್ದರು. ಆದರೆ ಇದೀಗ ಮತ್ತೆ ರವಿ ದೇವಾಡಿಗ ಕುಟುಂಬದಿಂದ ಯುವಕನಿಗೆ ಹಲ್ಲೆಯಾಗಿದ್ದು ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಪೋನ್ ಕರೆಯ ಮೂಲಕ ಕೆ.ಪಿ ಜಗದೀಶ ಅಧಿಕಾರಿ ಅವರು ತಿಳಿಸಿದಾಗ, ಈ ಕುಟುಂಬದ ಬಗ್ಗೆ ಈ ಹಿಂದೆ ತಮಗೆ ಸರಿಯಾಗಿ ಗೊತ್ತಿಲ್ಲದೆ ತಾವು ತಪ್ಪು ಮಾಡಿದ್ದೇವೆ. ಈ ಪ್ರಕರಣಕ್ಕೆ ತಾವು ಕೈ ಹಾಕಲ್ಲ ಎಂದು ಜಾರಿಕೊಂಡಿದ್ದಾರೆ.