×
Ad

ದಕ್ಷಿಣ ಕೊರಿಯಕ್ಕೆ ಅಮೆರಿಕದ ಅದೃಶ್ಯ ವಿಮಾನಗಳ ಆಗಮನ

Update: 2016-02-17 19:50 IST

ಒಸಾನ್ ವಾಯು ನೆಲೆ (ದಕ್ಷಿಣ ಕೊರಿಯ), ಫೆ. 17: ಅಮೆರಿಕದ ನಾಲ್ಕು ಎಫ್-22 ಅದೃಶ್ಯ ಯುದ್ಧ ವಿಮಾನಗಳು ಬುಧವಾರ ದಕ್ಷಿಣ ಕೊರಿಯದ ಮೇಲೆ ಹಾರಾಟ ನಡೆಸಿದವು.

ಉತ್ತರ ಕೊರಿಯ ನಾಶವಾಗುತ್ತದೆ ಎಂಬುದಾಗಿ ದಕ್ಷಿಣ ಕೊರಿಯದ ಅಧ್ಯಕ್ಷೆ ಎಚ್ಚರಿಕೆ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಇದು ಉತ್ತರ ಕೊರಿಯದ ವಿರುದ್ಧ ದಕ್ಷಿಣ ಕೊರಿಯದದ ಮಿತ್ರ ಕೂಟದ ಸ್ಪಷ್ಟ ಬಲಪ್ರದರ್ಶನವಾಗಿದೆ ಎಂಬುದಾಗಿ ಬಣ್ಣಿಸಲಾಗಿದೆ.

ಇತ್ತೀಚೆಗೆ ಉತ್ತರ ಕೊರಿಯ ಜಲಜನಕ ಬಾಂಬ್ ಪರೀಕ್ಷೆ ಮತ್ತು ಉಪಗ್ರಹ ಉಡಾವಣೆ ನಡೆಸಿದ ಬಳಿಕ ಉಭಯ ಕೊರಿಯಗಳ ನಡುವೆ ಉಂಟಾದ ಬಿಕ್ಕಟ್ಟು ಈಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ರಾಡಾರನ್ನು ತಪ್ಪಿಸಿ ಹಾರುವ ಸಾಮರ್ಥ್ಯವುಳ್ಳ ಅತ್ಯುನ್ನತ ತಂತ್ರಜ್ಞಾನದ ವಿಮಾನಗಳು ಸಿಯೋಲ್ ಸಮೀಪದ ಒಸಾನ್ ವಾಯು ನೆಲೆಯಲ್ಲಿ ಬುಧವಾರ ಇಳಿದವು. ಅವುಗಳನ್ನು ಅಮೆರಿಕ ಮತ್ತು ದಕ್ಷಿಣ ಕೊರಿಯಗಳ ಇತರ ಯುದ್ಧ ವಿಮಾನಗಳು ಸುತ್ತುವರಿದಿದ್ದವು.

ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಗಳ ನಡುವೆ ಉದ್ವಿಗ್ನತೆ ತಲೆದೋರಿದಾಗಲೆಲ್ಲ ಅಮೆರಿಕ ತನ್ನ ಶಕ್ತಿಶಾಲಿ ಯುದ್ಧ ವಿಮಾನಗಳನ್ನು ದಕ್ಷಿಣ ಕೊರಿಯಕ್ಕೆ ಕಳುಹಿಸುತ್ತದೆ. ಕಳೆದ ತಿಂಗಳು ಉತ್ತರ ಕೊರಿಯ ಪರಮಾಣು ಪರೀಕ್ಷೆ ನಡೆಸಿದ ಬಳಿಕ ಅಮೆರಿಕ ಪರಮಾಣು ಬಾಂಬನ್ನು ಒಯ್ಯುವ ಸಾಮರ್ಥ್ಯದ ಬಿ-52 ಬಾಂಬರ್ ವಿಮಾನವನ್ನು ಕಳುಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News