ಮಂಜೇಶ್ವರ : ಸರಕಾರದ ಜೀರೋ ಲ್ಯಾಂಡ್ ಯೋಜನೆಯಲ್ಲಿ ಫಲಾನುಭವಿಗಳಿಗೆ ಗ್ರಾಮ ಕಚೇರಿಗಳ ಮೂಲಕ ಭೂರಹಿತರಿಗೆ ಭೂಮಿವಿತರಣೆ
ಮಂಜೇಶ್ವರ : ಮಂಜೇಶ್ವರ ತಾಲೂಕಿನ ಕಯ್ಯರು ಗ್ರಾಮದ ಓಪತ್ತಿಮೂಲೆ ಎಂಬಲ್ಲಿ ಸುಮಾರು 30 ಎಕ್ರೆ ಸ್ಥಳವನ್ನು ಸರಕಾರದ ಜೀರೋ ಲ್ಯಾಂಡ್ ಯೋಜನೆಯಲ್ಲಿ ಫಲಾನುಭವಿಗಳಿಗೆ ಗ್ರಾಮ ಕಚೇರಿಗಳ ಮೂಲಕ ಭೂರಹಿತರಿಗೆ ಭೂಮಿವಿತರಣೆ ಮಾಡಲಾಗಿದೆ.ಒಬ್ಬೊರಿಗೆ ತಲಾ 3 ಸೆಂಟ್ಸ್ ಸ್ಥಳದಂತೆ ನಿವೇಶನ ನೀಡಲಾಗಿದೆ.
ಇದೀಗ ಸ್ಥಳದ ಕಾಡು ಪೊದೆಗಳನ್ನು ಕಡಿದು ಪರಿಶೀಲನೆ ನಡೆಸುತ್ತಿರುವಾಗ ಈ ಸ್ಥಳದಲ್ಲಿ ಪುರಾತನ ಪುಣ್ಯ ದೈವ ಸ್ಥಾನಗಳ ಅವಶೇಷಗಳು ಪತ್ತೆಯಾಗಿವೆ.ನಾಗಬನ, ಕೊರತಿ ದೈವಬನ ಮತ್ತು ಕೊರಗಜ್ಜ ಕಟ್ಟೆ, ಮೂವರು ಮುಗೇರ ದೈವಗಳ ಬನಗಳ ಅವಶೇಷಗಳು ಇಲ್ಲಿ ಕಂಡು ಬಂದಿವೆ.
ಹಿಂದೆ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಸ್ವಾಧಿೀನದಲ್ಲಿ ದ್ದ ಈ ಸ್ಥಳದಲ್ಲಿ ದೈವಗಳಿಗೆ ಪರ್ವ ನಡೆಯುತ್ತಿತ್ತೆಂಬುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.ಕಾಡಿನೊಳಗೆ ಪತ್ತೆಯಾದ ದೈವಗಳ ಬನಗಳನ್ನು ರಕ್ಷಿಸಲು ಬನ ಸಂರಕ್ಷಣ ಸಮಿತಿ ರಚಿಸಲು ಮುಂದಾಗಿದ್ದಾರೆ.ಈ ಸ್ಥಳವನ್ನು ಬನಗಳ ಅಭಿವೃದ್ಧಿಗೆ ಕಾದಿರಿಸಬೇಕೆಂಬುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಅನರ್ಹರಿಗೆ ಸ್ಥಳ ವಿತರಣೆ: ಭೂರಹಿತರಿಗೆ ಸರಕಾರದ ಜೀರೋ ಲ್ಯಾಂಡ್ ಯೋಜನೆಯಲ್ಲಿ ಬಡವರಿಗೆ ಮನೆ ನಿರ್ಮಿಸಲು ತಲಾ 3 ಸೆಂಟ್ಸ್ ಸ್ಥಳ ವಿತರಣೆ ಎಂದಿದ್ದರೂ ಈ ಪಟ್ಟಿಯಲ್ಲಿ ಬಹಳಷ್ಟು ಶ್ರೀಮಂತರು ಒಳಪ್ಪಟ್ಟಿರುವ ಆರೋಪವಿದೆ.ಕಾಸರಗೋಡು ಜಿಲ್ಲೆಯಾದ್ಯಂತ ಈ ಯೋಜನೆಯಲ್ಲಿ ಹಲವಾರು ಅನರ್ಹರು ಸೇರಿದ್ದಾರೆ.ಅನ್ಯ ರಾಜ್ಯಗಳಿಂದ ಕೆಲಸಕ್ಕೆ ಆಗಮಿಸಿದವರು, ಕೆಲಕಡೆಗಳಲ್ಲಿ ಫ್ಲಾಟ್‌ಗಳಲ್ಲಿ ವಾಸಿಸುವ ಶ್ರೆಮಂತರನ್ನು ಫಲಾನುಭವಿಗಳ ಪಟ್ಟಿಯಲ್ಲಿ ಕಾಣಬಹುದು.ಇವರಿಗೆ ಊರಲ್ಲಿ ಸ್ಥಳವಿದ್ದು ಸ್ಥಳವಿಲ್ಲವೆಂಗುದಾಗಿ ಕಡತದಲ್ಲಿ ದಾಖಲಿಸಿ ಭೂಮಿ ವಿತರಿಸಲಾಗಿದೆ.ಆಡಳಿತ ರಾಜಕೀಯ ನಾಯಕರ, ಚುನಾಯಿತರ ಒತ್ತಡಕ್ಕೆ ಮಣಿದು ಕೆಲವು ಕಂದಾಯ ಅಧಿಕಾರಿಗಳು ಶ್ರೆಮಂತರನ್ನು ಬಡವರಾಗಿ ಬಿಂಬಿಸಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಕಾಂಚಾಣಕ್ಕೆ ಕೈ ಒಡ್ಡಿ ನಿವೇಶನ ಹಂಚಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಸ್ಥಳೀಯವಾಗಿ ಹಲವಾರು ವರ್ಷಗಳಿಂದ ಬಾಡಿಗೆ ಕೊಠಡಿಯಲ್ಲಿ ವಾಸಿಸುವವರನ್ನು ಈ ಯೋಜನೆಯಿಂದ ಹೊರತು ಪಡಿಸಲಾಗಿದೆ ಎಂಬ ಆರೋಪ ಬಲವಾಗಿದೆ. ಈ ಕುರಿತು ಕುಡಾಲು ಮೇರ್ಕಳದಲ್ಲಿ ಹಂಚಿದ ಸ್ಥಳದ ಕುರಿತು ರಾಜಕೀಯ ಯುವ ಸಂಘಟನೆಯ ನಾಯಕರು ಕಂದಾಯ ಸಚಿವರಿಗೆ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗೆ ದೂರು ಸಲ್ಲಿಸಿದರೂ ಆಡಳಿತ ರಾಜಕೀಯ ಪ್ರಭಾವದಿಂದ ಯಾವುದೇ ಪರಿಣಾಮ ಬೀರಿಲ್ಲ. ಸರಕಾರದ ಮಾನದಂಡದ ಅವಧಿಮುಗಿದ ಬಳಿಕ ಮುಂದೆ ಈ ಸ್ಥಳವನ್ನು ಮಾರಾಟ ಮಾಡಲು ಹೆಚ್ಚಿನ ಶ್ರೀಮಂತ ಫಲಾನುಭವಿಗಳು ಕಾಯುತ್ತಿದ್ದಾರೆ.