×
Ad

ಪಾಕ್ ಜೈಲಿನಲ್ಲಿ ಕೊಳೆಯುತ್ತಿರುವ ಮುಂಬೈನ ಎಂಜಿನಿಯರ್ ಬಿಡುಗಡೆಗೆ ಹೆತ್ತವರ ಮೊರೆ

Update: 2016-02-17 21:37 IST

ಮುಂಬೈ,ಫೆ.17: ಗೂಢಚರ್ಯೆ ಆರೋಪದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಕೊಳೆಯುತ್ತಿರುವ ಮುಂಬೈನ ಎಂಜಿನಿಯರ್‌ವೋರ್ವನ ಬಗ್ಗೆ ಅನುಕಂಪ ತೋರಿಸುವಂತೆ ಮತ್ತು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸುವಂತೆ ಅವರ ಹೆತ್ತವರು ಆ ರಾಷ್ಟ್ರದ ಅಧಿಕಾರಿಗಳನ್ನು ಕೋರಿಕೊಂಡಿದ್ದಾರೆ.

ನನ್ನ ಮಗನ ಪ್ರಕರಣವನ್ನು ಅನುಕಂಪದಿಂದ ಮತ್ತು ರಾಜಕೀಯವನ್ನು ಮೀರಿ ಪರಿಶೀಲಿಸುವಂತೆ ನಾನು ಭಾರತ ಮತ್ತು ಪಾಕಿಸ್ತಾನ ಸರಕಾರಗಳನ್ನು ಕೋರುತ್ತಿದ್ದೇನೆ ಎಂದು ಫೌಝಿಯಾ ಅನ್ಸಾರಿ ಹೇಳಿದರು. ಅವರ ಪುತ್ರ 31ರ ಹರೆಯದ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವೀಧರ ಹಾಮಿದ್ ನೆಹಲ್ ಅನ್ಸಾರಿಗೆ ಪಾಕಿಸ್ತಾನದ ನ್ಯಾಯಾಲಯವು ಮೂರು ವರ್ಷಗಳ ಶಿಕ್ಷೆ ವಿಧಿಸಿ ಜೈಲಿಗೆ ತಳ್ಳಿದೆ.

ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿದ್ದ ಯುವತಿಯನ್ನು ಭೇಟಿಯಾಗಲು 2012ರಲ್ಲಿ ಅಫಘಾನಿಸ್ಥಾನದಿಂದ ಅಕ್ರಮವಾಗಿ ಪಾಕಿಸ್ತಾನವನ್ನು ಪ್ರವೇಶಿಸಿದ್ದ ಅನ್ಸಾರಿ ಆ ಬಳಿಕ ನಾಪತ್ತೆಯಾಗಿದ್ದ. ಬಳಿಕ ಆತನನ್ನು ಬಂಧಿಸಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ ಗೂಢಚರ್ಯೆ ಆರೋಪವನ್ನು ಹೊರಿಸಿ ಅಪರಾಧಿಯೆಂದು ಘೋಷಿಸಲಾಗಿತ್ತು.

ಆತನ ಹೆತ್ತವರು ಪಾಕಿಸ್ತಾನಿ ನ್ಯಾಯಾಲಯವೊಂದರಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದು,ತಮ್ಮ ಮಗ ಪಾಕಿಸ್ತಾನಿ ಸೇನೆಯ ವಶದಲ್ಲಿದ್ದಾನೆಂಬ ವಿಷಯ ಅವರಿಗೆ ಜನವರಿಯಲ್ಲಿ ತಿಳಿದುಬಂದಿತ್ತು. ರವಿವಾರ ಖೈಬರ್ ಪಕ್ತುಂಖ್ವಾ ಪ್ರಾಂತ್ಯದ ಕೋಹಟ್‌ನ ನ್ಯಾಯಾಲಯವು ಅನ್ಸಾರಿಯನ್ನು ಅಪರಾಧಿಯೆಂದು ಘೋಷಿಸಿದ್ದು, ಪೇಷಾವರ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ.

ಅನ್ಸಾರಿಯ ತಂದೆ ನೆಹಲ್ ಅಹ್ಮದ್ ಅನ್ಸಾರಿ(59) ಅವರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದರೆ,ಅಣ್ಣ ಖಾಲಿದ್ ಅನ್ಸಾರಿ(32) ದಂತವೈದ್ಯರಾಗಿದ್ದಾರೆ.

ನಾವು ಆಸೆಯನ್ನು ಬಿಟ್ಟಿಲ್ಲ, ನಾವು ದೇವರಲ್ಲಿ ವಿಶ್ವಾಸವಿರಿಸಿದ್ದೇವೆ. ಭಾರತ ಸರಕಾರ ಮತ್ತು ನ್ಯಾಯಾಂಗದಲ್ಲಿ ನಮಗೆ ವಿಶ್ವಾಸವಿದೆ ಮತ್ತು ಆತನನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಎಲ್ಲ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ ಎಂದು ಫೌಝಿಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News