ವಿವಾದಿತ ದ್ವೀಪದಲ್ಲಿ ಚೀನಾದಿಂದ ಕ್ಷಿಪಣಿ ನಿಯೋಜನೆ: ತೈವಾನ್ ಆರೋಪ
Update: 2016-02-17 23:52 IST
ಬೀಜಿಂಗ್, ಫೆ. 17: ದಕ್ಷಿಣ ಚೀನಾ ಸಮುದ್ರದಲ್ಲಿರುವ ವಿವಾದಾಸ್ಪದ ದ್ವೀಪವೊಂದರಲ್ಲಿ ಚೀನಾ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ತೈವಾನ್ ಬುಧವಾರ ಹೇಳಿದೆ.
ಅದೇ ವೇಳೆ, ಆಯಕಟ್ಟಿನ ಪ್ರದೇಶದಲ್ಲಿ ‘‘ಸ್ವ-ರಕ್ಷಣೆ’’ಯನ್ನು ನಿರ್ಮಿಸುವ ಹಕ್ಕು ತನಗಿದೆ ಎಂದು ಚೀನಾ ಪ್ರತಿಪಾದಿಸಿದೆ.
ಕಳೆದ ವಾರ ಕ್ಷಿಪಣಿ ಉಡಾವಕಗಳು ವುಡಿ ದ್ವೀಪಕ್ಕೆ ಬಂದಿವೆ ಎಂಬುದಾಗಿ ‘ಫಾಕ್ಸ್ ನ್ಯೂಸ್’ ವರದಿ ಮಾಡಿದ ಬಳಿಕ, ಇಂಥ ಸಲಕರಣೆಗಳು ಅಲ್ಲಿ ಇರುವುದನ್ನು ತೈವಾನ್‌ನ ರಕ್ಷಣಾ ಸಚಿವಾಲಯ ಖಚಿತ ಪಡಿಸಿದೆ.
ಈ ವಲಯದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕರೆ ನೀಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಇಡೀ ಪಾರಾಸೆಲ್ಸ್ ದ್ವೀಪ ಸಮೂಹದ ನಿಯಂತ್ರಣವನ್ನು ಚೀನಾ ಹೊಂದಿದೆ. ಅದೇ ವೇಳೆ, ಈ ದ್ವೀಪಗಳ ಮೇಲೆ ವಿಯೆಟ್ನಾಂ ಮತ್ತು ತೈವಾನ್‌ಗಳೂ ಹಕ್ಕು ಸಾಧಿಸುತ್ತಿವೆ.