ಭೂಮಿಯಲ್ಲಿ ಭಾವಿಸಿದ್ದಕ್ಕಿಂತಲೂ ಹಿಂದೆಯೇ ಆಮ್ಲಜನಕವಿತ್ತು: ನೂತನ ಅಧ್ಯಯನ
ಲಂಡನ್, ಫೆ. 17: ಭೂಮಿಯಲ್ಲಿ ಆಮ್ಲಜನಕದ ಉಪಸ್ಥಿತಿ ಈಗ ಭಾವಿಸಿರುವುದಕ್ಕಿಂತಲೂ ತುಂಬಾ ಹಿಂದೆಯೇ ಇತ್ತು ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.
380 ಕೋಟಿ ವರ್ಷಗಳ ಹಿಂದೆಯೇ ಭೂಮಿಯ ವಾತಾವರಣದಲ್ಲಿ ಅಲ್ಪ ಪ್ರಮಾಣದಲ್ಲಿ ಆಮ್ಲಜನಕ ರೂಪುಗೊಂಡಿತ್ತು ಎಂದು ಅದು ಹೇಳಿದೆ. ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ರೂಪುಗೊಂಡಿತು ಎಂಬುದರ ಆಧಾರದಲ್ಲಿ ಭೂಮಿಯ ಮೇಲೆ ಜೀವದ ಉಗಮ ಮತ್ತು ವಿಕಾಸವನ್ನು ಅಂದಾಜಿಸಬಹುದಾಗಿದೆ.
ಭೂಮಿಯ ವಾತಾವರಣಕ್ಕೆ ಆಮ್ಲಜನಕ ಎರಡು ಪ್ರಮುಖ ಹಂತಗಳಲ್ಲಿ ಸೇರಿಕೊಂಡಿತು ಎಂಬುದನ್ನು ಹೆಚ್ಚಿನ ಸಂಶೋಧಕರು ಒಪ್ಪುತ್ತಾರೆ. ಒಂದು, 250ರಿಂದ 240 ಕೋಟಿ ವರ್ಷಗಳ ಹಿಂದೆ ನಡೆದ ‘ಭಾರೀ ಆಮ್ಲಜನಕ ವಿದ್ಯಮಾನ’ದ ಅವಧಿಯಲ್ಲಿ ಮತ್ತು ಎರಡನೆಯದು, 75ರಿಂದ 54 ಕೋಟಿ ವರ್ಷಗಳ ಹಿಂದಿನ ‘ಲೇಟ್ ನಿಯೋಪ್ರೊಟೆರೋರೆಯಿಕ್ ಶಕೆ’ಯಲ್ಲಿ. ಸುಮಾರು 54ರಿಂದ 52 ಕೋಟಿ ವರ್ಷಗಳ ಹಿಂದಿನ ‘ಕ್ಯಾಂಬ್ರಿಯನ್ ಸ್ಫೋಟ’ದ ಅವಧಿಯಲ್ಲಿ ಪ್ರಾಣಿಗಳ ಉಗಮವಾಗಲು ‘ಲೇಟ್ ನಿಯೋಪ್ರೊಟೆರೋರೆಯಿಕ್ ಶಕೆ’ಯ ಅವಧಿಯಲ್ಲಿ ವಾತಾವರಣದಲ್ಲಿ ಆಮ್ಲಜನಕ ಉಂಟಾಗಿರುವುದೇ ಕಾರಣ ಎಂದು ಭಾವಿಸಲಾಗಿದೆ.