×
Ad

ಪಾಲಿಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ವಿಪಕ್ಷ ಆರೋಪ ಸದಸ್ಯರ ಹಸ್ತಕ್ಷೇಪ- ಅಭಿವೃದ್ಧಿಯಾದ ರಸ್ತೆಗೆ ಮತ್ತೆ ಅನುದಾನ!

Update: 2016-02-19 16:43 IST

ಮಂಗಳೂರು, ಫೆ. 19: ನಗರ ಪಾಲಿಕೆಯಲ್ಲಿ ಆಡಳಿತ ಪಕ್ಷವು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ತಮ್ಮ ಆರೋಪವನ್ನು ವಿಪಕ್ಷ ಸದಸ್ಯರು ಪುನರುಚ್ಚರಿಸಿದ್ದಾರೆ.

ವಿಪಕ್ಷ ನಾಯಕ ಸುಧೀರ್ ಶೆಟ್ಟಿಯವರು ಇಂದು ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡುವ ಮೂಲಕ ನಮ್ಮ ಆರೋಪವನ್ನು ಪುಷ್ಟೀಕರಿಸಿದಂತಾಗಿದೆ ಎಂದರು.
ರಾಜ್ಯ ಸರಕಾರದ ಎಸ್‌ಎಫ್‌ಸಿ ಮತ್ತು ಕೇಂದ್ರ ಸರಕಾರದ 14ನೆ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ವಿವಿಧ ಕಾಮಗಾರಿಗಳಿಗೆ 50 ಲಕ್ಷ ರೂ.ಗಳಿಗಿಂತ ಹೆಚ್ಚು ಅನುದಾವನ್ನು ಪಡೆದಿರುವುದು ಎಲ್ಲಾ ಕಾಂಗ್ರೆಸ್ ಸದಸ್ಯರ ವಾರ್ಡುಗಳಾಗಿವೆ. ಈ ಎರಡೂ ಅನುದಾನಗಳಲ್ಲಿ ಶೂನ್ಯ ಅನುದಾನದ ಪಡೆದ 15 ವಾರ್ಡ್‌ಗಳಲ್ಲಿ ಬಿಜೆಪಿ ಪ್ರತಿನಿಧಿಸುವ 6 ವಾರ್ಡ್‌ಗಳು ಮತ್ತು ಜೆಡಿಎಸ್ ಪ್ರತಿನಿಧಿಸುವ 2 ವಾರ್ಡ್‌ಗಳು ಸೇರಿವೆ. ಅಷ್ಟು ಮಾತ್ರವಲ್ಲದೆ ವಾರ್ಡ್ ನಂ. 52ರಲ್ಲಿ ತಲಾ 30 ಲಕ್ಷ ರೂ. ಮತ್ತು 10 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಆಗಿದ್ದರೂ ಮತ್ತೆ ಆ ರಸ್ತೆಗೆ ಹಣ ಇಟ್ಟಿದ್ದಾರೆ ಎಂದು ಸುಧೀರ್ ಶೆಟ್ಟಿ ದೂರಿದರು.

ಪದವು ಹೈಸ್ಕೂಲ್ ಬಳಿ ಭದ್ರಕಾಳಿ ದೇವಸ್ಥಾನ ರಸ್ತೆ ಕಾಮಗಾರಿಗೆ 90 ಲಕ್ಷ ರೂ. ಪ್ರಸ್ತಾವನೆ, ಮಂಗಳಾದೇವಿ ದೇವಸ್ಥಾನದಿಂದ ಎಮ್ಮೆಕೆರೆ ಪ್ರಥಮ ಕ್ರಾಸ್‌ವರೆಗಿನ ರಸ್ತೆ ಪ್ರಸ್ತಾವನೆ, ಕೂಳೂರು- ಕಾವೂರು ಮುಖ್ಯ ರಸ್ತೆ ಪ್ರಸ್ತಾವನೆಯನ್ನು ಪರಿಗಣಿಸಲಾಗಿಲ್ಲ. ಪಾಲಿಕೆ ಆಡಳಿತದಲ್ಲಿ ಶಾಸಕರ ಹಸ್ತಕ್ಷೇಪವಿಲ್ಲ ಎಂದು ಉತ್ತರ ವಿಧಾನಸಭಾ ಶಾಸಕರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಪಾಲಿಕೆಯಲ್ಲಿ ಆಡಳಿತಾಧಿಕಾರಿ ಅಧಿಕಾರವಿದ್ದಾಗ ತಮ್ಮ ಕ್ಷೇತ್ರದ 58 ಕಾಮಗಾರಿಗಳಿಗೆ 3 ಕೋಟಿ ರೂ.ಗಳಿಗೆ ಎಸ್‌ಎಫ್‌ಸಿ ಅನುದಾನದಲ್ಲಿ ಕಾಮಗಾರಿಯನ್ನು ಅವರು ಮಂಜೂರು ಮಾಡಿಸಿದ್ದರು. ಸರಕಾರವು ಈ ಕಾಮಗಾರಿಗೆ ಮೊತ್ತ ಬಿಡುಗಡೆ ಮಾಡುವ ಆದೇಶದಲ್ಲಿ ಕಾಮಗಾರಿಯನ್ನು ಟೆಂಡರ್ ಪ್ರಕ್ರಿಯೆಯನ್ನು ಇ ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕವೇ ಕೈಗೊಳ್ಳಬೇಕೆಂದು ಆದೇಶಿಸಿತ್ತು. ಆದರೆ ಈ ಕಾಮಗಾರಿಯನ್ನು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ಟೆಂಡರ್ ಕರೆಯದೆ ನಿರ್ಮಿತಿ ಕೇಂದ್ರಕ್ಕೆ ವಹಿಸಿರುವುದು ಸಾಸಕ ವ್ಯವಸ್ಥಿತ ವ್ಯವಸ್ಥೆ. ಪಾಲಿಕೆಯಲ್ಲಿ ನಿಷ್ಠಾವಂತ, ದಕ್ಷ ಆಯುಕ್ತರಾಗಿದ್ದ ಹೆಫ್ಸಿಬಾ ರಾಣಿ ಕೊರ್ಲಪಾಟಿಯವರು ಈ ಕಾಮಗಾರಿಯ ಅನುಷ್ಠಾನದಲ್ಲಾದ ಲೋಪಗಳನ್ನು ಪಟ್ಟಿ ಮಾಡಿ ಸರಕಾರಕ್ಕೆ ವರದಿ ನೀಡಿದ್ದರು. ಈ ಕಾಮಗಾರಿಯ ಗುಣಮಟ್ಟದ ಸಂದೇಹವನ್ನು ವ್ಯಕ್ತಪಡಿಸಿ ಮೂರನೆ ಪಕ್ಷದ ತಪಾಸಣೆಗೆ ಸಲಹೆ ನೀಡಿದ್ದರು. ಆದರೆ ಅವರನ್ನು ಪಾಲಿಕೆಯಿಂದ ವರ್ಗಾವಣೆ ಮಾಡಲಾಯಿತು ಎಂದು ದೂರಿದರು.

ಬಜಾಲ್ ಮತ್ತು ಸುರತ್ಕಲ್‌ನ ಮಾಧವನಗರದಲ್ಲಿ ಎಡಿಬಿ ಯೋಜನೆಯಡಿ ಕೈಗೊಳ್ಳಲಾದ ಯುಜಿಡಿ ಕಾಮಗಾರಿಗಳು ಪೂರ್ತಿಯಾಗುವ ಮೊದಲೇ ಅದನ್ನು ಉದ್ಘಾಟಿಸಿ ಜನರ ಕಣ್ಣಿಗೆ ಮಣ್ಣೆರಚಲಾಗಿದೆ. ಪ್ರತಿ ಪಕ್ಷದ ವಿರೋಧದ ನಡುವೆಯೂ ದ್ವಿತೀಯ ಹಂತದ ಎಡಿಬಿ ಸಾಲ ಮತ್ತು 250 ಕೋಟಿ ರೂ.ಗಳಿಗೆ ಮಂಜೂರಾತಿ ನೀಡ ಪ್ರಥಮ ಹಂತದ ಕಾಮಗಾರಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲಾಗಿದೆ ಎಂದು ಸುಧೀರ್ ಶೆಟ್ಟಿ ಆಪಾದಿಸಿದರು.
ಗೋಷ್ಠಿಯಲ್ಲಿ ಮನಪಾದ ಬಿಜೆಪಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರೂಪಾ ಡಿ. ಬಂಗೇರ, ವಿಜಯ ಕುಮಾರ್ ಶೆಟ್ಟಿ, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.

ಪುರಭವನ ನವೀಕರಣ ಕಾಮಗಾರಿಯ ತನಿಖೆಗೆ ಆಗ್ರಹ
ಪುರಭವನದ ನವೀಕರಣಕ್ಕಾಗಿ ಸುಮಾರು 5.5 ಕೋಟಿ ರೂ.ಗಳನ್ನು ವೆಚ್ಚ ವ್ಯಯಿಸಲಾಗಿದ್ದು, ಸಾಕಷ್ಟು ಅವ್ಯವಹಾರಗಳಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮುಂದಿನ ಪರಿಷತ್ತು ಸಭೆಯಲ್ಲಿ ಆಗ್ರಹಿಸುವುದಾಗಿ ಸುಧೀರ್ ಶೆಟ್ಟಿ ಕಣ್ಣೂರು ಈ ಸಂದರ್ಭ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News