ಮಂಗಳೂರು : 22ರಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ
ಮಂಗಳೂರು, ಫೆ. 19: ಆರೋಗ್ಯ ಇಲಾಖೆಯ ವಿವಿಧ ವಿಷಯಗಳ ಕುರಿತಂತೆ ವಿಸ್ತೃತವಾಗಿ ಚರ್ಚೆ ನಡೆಸಲು ಫೆ.22ರಂದು ಬೆಂಗಳೂರಿನ ಹೊರವಲಯದಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸಭೆಯಲ್ಲಿ ಪರಾಮರ್ಶೆ ನಡೆಯಲಿದೆ. ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳ ಅನುಷ್ಠಾನ, ಬಾಕಿ ಉಳಿದಿರುವ ಯೋಜನೆಗಳು, ಮುಂದಿನ ಬಜೆಟ್‌ಗೆ ಜನೋಪಯೋಗಿ ಯೋಜನೆಗಳು, ಆಯುಷ್ ಇಲಾಖೆಯ ಗುರಿ, ಸ್ಥಗಿತಗೊಳಿಸಿರುವ ಆರೋಗ್ಯ ಬಂಧು ಯೋಜನೆಗೆ ಪರ್ಯಾಯ ವ್ಯವಸ್ಥೆ, ಖಾಲಿ ಇರುವಲ್ಲಿ ವೈದ್ಯಕೀಯ ಕಾಲೇಜುಗಳಿಂದ ವೈದ್ಯರ ಹುದ್ದೆಯನ್ನು ಭರ್ತಿಗೊಳಿಸುವುದು ಮೊದಲಾದ ವಿಚಾರಗಳು ಚರ್ಚೆಗೊಳ್ಳಲಿವೆ ಎಂದು ಅವರು ಹೇಳಿದರು.
108 ಆ್ಯಂಬುಲೆನ್ಸ್‌ಗಳಿಗೆ ಹೊಸದಾಗಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಮುಷ್ಕರ
ನಡೆಸಿದ 153 ಮಂದಿಯನ್ನು ಗುತ್ತಿಗೆ ಸಂಸ್ಥೆ ಜಿವಿಕೆ ಕೆಲಸದಿಂದ ತೆಗೆದುಹಾಕಿದೆ. ಮುಷ್ಕರದಲ್ಲಿ ಭಾಗಿಯಾಗದ 200 ಮಂದಿಗೆ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದೆ. ಹೊಸದಾಗಿ ನೇಮಕಗೊಳ್ಳುತ್ತಿರುವ 600 ಮಂದಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿ ದೆ. ಇನ್ನೂ 500 ಮಂದಿಯನ್ನು ನೇಮಕಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಸಚಿವ ಖಾದರ್ ಹೇಳಿರು.
ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಅಭಿಯಾನ ಫೆ.21ರಂದು ರಾಜ್ಯಾದ್ಯಂತ
ನಡೆಯಲಿದೆ. ಈ ಅಭಿಯಾನದಲ್ಲಿ 5 ವರ್ಷದೊಳಗಿನ ಸುಮಾರು 44.39 ಲಕ್ಷ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.
ಒಟ್ಟು 32,617 ಬೂತ್‌ಗಳಲ್ಲಿ 51,732 ತಂಡಗಳಲ್ಲಿ 1,03,464 ಲಸಿಕಾ ಕಾರ್ಯಕರ್ತರು ಲಸಿಕೆ ನೀಡಲಿದ್ದಾರೆ. 6,522 ಮೇಲ್ವಿಚಾರಕರು, 1,205 ಸಂಚಾರಿ ತಂಡ ಹಾಗೂ 1,736 ಇನ್ನೊಂದು ಸಂಚಾರಿ ತಂಡ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ
ಸುಮಾರು 29 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕೂಲಿ ಕಾರ್ಮಿಕರು ಮತ್ತು ವಲಸಿಗರ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು. ಎಲ್ಲ ಬಸ್, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ಜಿಲ್ಲೆಗೆ ‘ಶ್ರದ್ಧಾಂಜಲಿ’
ಆರ್‌ಟಿಒ ನಿಯಮ ಪ್ರಕಾರ ಹಳೆಯ ಆ್ಯಂಬುಲೆನ್ಸ್‌ಗಳನ್ನು ಶವ ಸಾಗಾಟವಾಹನಗಳನ್ನಾಗಿ ಬದಲಿಸಲಾಗುತ್ತಿದೆ. ಪ್ರತಿ ಜಿಲ್ಲೆಗೆ ಒಂದು ವಾಹನವನ್ನು ನೀಡಲಾಗುತ್ತಿದೆ. ಈ ವಾಹನಗಳಿಗೆ ಕಪ್ಪು ಬಣ್ಣ ಬಳಿಯು ಕೆಲಸ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ‘ಶ್ರದ್ಧಾಂಜಲಿ’ ಹೆಸರಿನಲ್ಲಿ ಈ ವಾಹನಗಳು ಸೇವೆಗೆ ಸಿದ್ಧವಾಗಲಿದೆ ಎಂದು ಸಚಿವ ಖಾದರ್ ಹೇಳಿದರು.