ಬಾಲಕಿ ಕೇಳಿದ್ದು ಸ್ವಲ್ಪ ಆಹಾರ, ಸಿಕ್ಕಿದ್ದು ಪೆಟ್ಟು, ಪ್ರಶ್ನಿಸಿದ ತಂದೆಯನ್ನು ಕೊಂದೇ ಹಾಕಿದರು!
ಬಿಹಾರ:ಹೊಟ್ಟೆ ತುಂಬದ್ದರಿಂದ ಇನ್ನೂ ಸ್ವಲ್ಪ ಕೊಡಿ ಎಂದು ಕೇಳಿದ ಐದನೆ ತರಗತಿಯ ಕಸೀದಾಳಿಗೆ ಸಿಕಿದ್ದು ಬೆತ್ತದ ಪೆಟ್ಟು. ಹೊಡೆದದ್ದೇಕೆ ಎಂದು ಕೇಳಲು ಬಂದ ಕಸೀದಾಳ ತಂದೆ ಮುಹಮ್ಮದ್ ಸಗೀರ್‌ರನ್ನು ಅಡುಗೆಯವ ಶಿಕ್ಷಕರು ಸೇರಿ ಹೊಡೆದು ಕೊಂದರು! ನಂಬಲಸಾಧ್ಯವಾದ ಈ ಘಟನೆ ಫೆಬ್ರವರಿ ಹತ್ತರಂದು ಬಿಹಾರದ ಗೋಗಲಾ ಪುರ್‌ನ ರಾಜಕೀಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ನಾಡನ್ನೇ ಕಂಪಿಸುವಂತೆ ಮಾಡಿದೆ. ಹನ್ನೆರಡು ವರ್ಷದ ಕಸೀದಾ ಎರಡನೆ ಬಾರಿ ಊಟ ಕೇಳಿದ್ದು ಮಹಾಪರಾಧವಾಗಿತ್ತು. ಅಡುಗೆಯವ ಸಂಜಿತ್ ಎಂಬಾತ ಬಾಲಕಿಯನ್ನು ಹೊಡೆದಿದ್ದಾನೆ. ಮಗಳಿಗೆ ಯಾಕೆ ಹೊಡೆದೆ ಎಂದು ಕೇಳಲು ಶಾಲೆಗೆ ಬಂದ ಮುಹಮ್ಮದ್ ಸಗೀರ್‌ರಿಗೆ ಆತ ಮೂವರು ಶಿಕ್ಷಕರೊಂದಿಗೆ ಸೇರಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ. ಕೆಲವೇ ಗಂಟೆಗಳಲ್ಲಿ ಸಗೀರ್ ಮೃತರಾಗಿದ್ದರು.
ಸಗೀರ್‌ರ ಚಿಕ್ಕಮಗ ಚಾಂದ್ ಬಾಬುಗೂ ಇದೇ ಅಡುಗೆಯವ ಆರುತಿಂಗಳ ಮೊದಲು ಸ್ವಲ್ಪ ಪದಾರ್ಥ ಕೇಳಿದ್ದಕ್ಕಾಗಿ ಹೊಡೆದಿದ್ದು ಬಾಲಕನ ಬಲಗಾಲು ಮುರಿದಿತ್ತು. ಪೊಲೀಸರು ಶಾಲೆಯ ಮೂವರು ಶಿಕ್ಷಕರು ಹಾಗೂ ಅಡುಗೆಯವನ ಮೇಲೆ ಸಗೀರ್ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.ಅಷ್ಟರಲ್ಲಿ ಆರೋಪಿಗಳು ಭೂಗತರಾಗಿದ್ದಾರೆ. ಅಡುಗೆಯವನಾದ ಸಂಜಿತ್, ಶಿಕ್ಷಕರಾದ ಅನ್ಸಾರ್, ಹರ್‌ದೇವ್‌ರಾಮ್ ಮತ್ತೊಬ್ಬ ಸೇರಿ ಸಗೀರ್‌ರನ್ನು ಹೊಡೆದು ಸಾಯಿಸಿದ್ದರು. ಮೂತ್ರಪಿಂಡಕ್ಕೆ ಗಾಯವಾಗಿ ಮೃತರಾದ ಸಗೀರ್, ಕಸೀದಾ, ಚಾಂದ್ ಸಹಿತ ಐವರು ಮಕ್ಕಳ ತಂದೆಯಾಗಿದ್ದರು ಮಾತ್ರವಲ್ಲದೆ ಅವರು ಕುಟುಂಬದ ಏಕ ಮಾತ್ರ ಪೋಷಕರಾಗಿದ್ದರು. ಇದೀಗ ಈ ಕುಟುಂಬಕ್ಕೆ ನೆರೆಯವರು ಅನ್ನಾಹಾರ ನೀಡಿ ಸಹಕರಿಸುತ್ತಿದ್ದಾರೆ. ಬಿಹಾರದ ಶಾಲೆಗಳಲ್ಲಿ ಹೆಸರಿಗೆ ಮಾತ್ರ ಮಧ್ಯಾಹ್ನದೂಟ ಎನ್ನುವಂತಿದ್ದು ಇದಕ್ಕಾಗಿ ಒಂದು ದಿವಸಕ್ಕೆ ಒಬ್ಬನಿಗೆ ಕೇವಲ 3.86ರೂ. ಮಾತ್ರ ನೀಡಲಾಗುತ್ತಿದೆ.