ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣೆಗೆ ಸಿದ್ಧತೆ
ಬೆಳ್ತಂಗಡಿ: ಶನಿವಾರ ನಡೆಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ತಾಲೂಕಿನಲ್ಲಿ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಶುಕ್ರವಾರ ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಮತ ಯಂತ್ರ ಮತ್ತು ಮತದಾನಕ್ಕೆ ಬೇಕಾದ ಪರಿಕರಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಯಿತು. ತಾಲೂಕಿನಲ್ಲಿ 231 ಮತದಾನ ಕೇಂದ್ರಗಳಿನ್ನು ತೆರೆಯಲಾಗಿದೆ. 49 ಸೂಕ್ಷ್ಮ, 72 ಅತೀಸೂಕ್ಷ್ಮ ಹಾಗೂ 110 ಸಾಮಾನ್ಯ ಮತದಾನ ಕೇಂದ್ರಗಳಿದೆ. 45 ನಕ್ಸಲ್ ಸಕ್ರಿಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಆ ಬೂತ್‌ಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ 1270 ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಮತಗಟ್ಟೆಗಳ ಮೇಲುಸ್ತುವಾರಿಗೆ ಓರ್ವ ನೋಡೆಲ್ ಅಕಾರಿಯನ್ನು ನೇಮಿಸಲಾಗಿದ್ದು, ಪ್ರತೀ ತಾಲೂಕು ಪಂಚಾಯತ್ ಕ್ಷೇತ್ರಕ್ಕೊಂದರಂತೆ 26 ಮಂದಿಯನ್ನು ಸೆಕ್ಷರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈಗಾಗಲೇ ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ 203174 ಮತದಾರರಿದ್ದಾರೆ. ಮತದಾನದ ಸಂದರ್ಭದಲ್ಲಿ ಮೊದಲು ಜಿಲ್ಲಾ ಪಂಚಾಯತ್ ಮತದಾನವನ್ನು ಮಾಡಿ ಬಳಿಕ ತಾಲೂಕು ಪಂಚಾಯತ್‌ಗೆ ಮತದಾನ ಮಾಡಲು ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತೀ ಮತದಾನ ಕೇಂದ್ರಕ್ಕೆ 5 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತದಾನ ಬೆಳಗ್ಗೆ ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಹಾಗು ಸಿಬಂದಿಗಳಿಗೆ ಪೂರಕ ಮಾಹಿತಿಯನ್ನು ನೀಡಲಾಯಿತು. ಬಳಿಕ ಆಯಾಯ ಮತಗಟ್ಟೆಗಳಿಗೆ ವಿತರಿಸಿದ ಮತ ಯಂತ್ರ ಹಾಗೂ ಪರಿಕರಗಳನ್ನು ಪಡೆದು ತೆರಳಿದರು.