ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಆರೋಪಿಗೆ 7 ವರ್ಷ ಕಠಿಣ ಸಜೆ
ಮಂಗಳೂರು, ಫೆ. 19: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ ಆರೋಪಿ ಹರೀಶ್ ಪೂಜಾರಿ(33)ಎಂಬಾತನಿಗೆ 7 ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಸಂತ್ರಸ್ತೆಗೆ 8 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.
ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ದರ್ಖಾಸ್ ಮನೆ ಹರೀಶ್ ಪೂಜಾರಿ (33) ಅಪರಾಧಿ. ಈತ ಮನೆಯ ಸಮೀಪದ 19 ವರ್ಷದ ಯುವತಿಗೆ ಅತ್ಯಾಚಾರ ನಡೆಸಿದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹರೀಶ್ ಪೂಜಾರಿ ಯುವತಿಯ ಮನೆಯ ಬಳಿ ಕಲ್ಲಿನ ಕ್ವಾರಿ ಹೊಂದಿದ್ದ. ಯುವತಿಯ ಮನೆಗೆ ಕಲ್ಲು ಸಾಗಾಟ ಮಾಡುವ ಸಂದರ್ಭ ಆಕೆಯ ಪರಿಚಯವಾಗಿತ್ತು. ಆರಂಭದಲ್ಲಿ ಆಕೆಯ ಬಳಿ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆಕೆ ನಿರಾಕರಿಸಿದಾಗ ವಿಷದ ಬಾಟ್ಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತಿದ್ದ.
2012 ಅಕ್ಟೋಬರ್ 21 ರಂದು ಕಟೀಲು ದೇವಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೇವರ ಸಮ್ಮುಖ 2013ರ ಏಪ್ರಿಲ್ ತಿಂಗಳೊಳಗೆ ವಿವಾಹವಾಗುವುದಾಗಿ ಪ್ರಮಾಣ ಮಾಡಿದ್ದ. ಆಕೆ ಒಪ್ಪಿಕೊಂಡಿದ್ದಳು. ಹಿಂತಿರುಗಿ ಬರುವಾಗ ಅಲ್ಲೇ ಸಮೀಪದಗುಡ್ಡಕ್ಕೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದ. 2013 ಮೇ 10 ರಂದು ತನ್ನನ್ನು ವಿವಾಹವಾಗುವಂತೆ ಯುವತಿ ಹರೀಶ್ ಪೂಜಾರಿಯನ್ನು ಕೇಳಿದ್ದಳು. ವಿವಾಹ ಆಗಬೇಕಾದರೆ 1 ಲಕ್ಷ ರೂ. ಹಾಗೂ 10 ಪವನ್ ಚಿನ್ನ ನೀಡಬೇಕು ಎಂದು ಬೇಡಿಕೆ ಇರಿಸಿದ್ದನು. ಮದುವೆಯಾಗದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದಾಗ ಯುವಕ ಕೊಲೆ ಬೆದರಿಕೆ ಒಡ್ಡಿದ್ದ. ಯುವತಿ ಸ್ಥಳೀಯ ಮಾನವ ಹಕ್ಕು ಹೋರಾಟಗಾರರಲ್ಲಿ ಹಾಗೂ ವ್ಯಾಯಾಮ ಶಾಲೆಯವರ ಜತೆ ಆತನಿಗೆ ಬುದ್ಧಿಹೇಳುವಂತೆ ಕೇಳಿಕೊಂಡಿದ್ದಳು. ಅವರು ಬುದ್ಧಿ ಹೇಳಿದರೂ ಆತ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಯುವತಿ ದೂರಿನ ಮೇಲೆಗೆ ಮೂಡುಬಿದಿರೆ ಠಾಣೆಯಲ್ಲಿ 2013 ಜೂನ್ 10 ರಂದು ಹರೀಶ್ ವಿರುದ್ಧ ಅತ್ಯಾಚಾರ, ಮೋಸ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು.
ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮೂಡುಬಿದಿರೆ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಮಾನವಹಕ್ಕು ಹೋರಾಟಗಾರರು, ವ್ಯಾಯಾಮ ಶಾಲೆಯವರು ಸಾಕ್ಷಿ ನುಡಿದಿದ್ದರು. ಅಲ್ಲದೆ ಅತ್ಯಾಚಾರ ನಡೆಸಿರುವುದು ವೈದ್ಯಕೀಯ ಪರೀಕ್ಷೆಯಿಂದಲೂ ದೃಢಪಟ್ಟಿತ್ತು. ಆರೋಪಿಯ ವಿರುದ್ಧ ದಾಖಲಾಗಿದ್ದ ಅತ್ಯಾಚಾರ, ಮೋಸ ಹಾಗೂ ಕೊಲೆ ಬೆದರಿಕೆ ಪ್ರಕರಣಗಳು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಶುಕ್ರವಾರ ಆತನಿಗೆಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಯಿತು.
ಅತ್ಯಾಚಾರ ಪ್ರಕರಣದಲ್ಲಿ 7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ದಂಡ, ತಪ್ಪಿದರೆ 2 ತಿಂಗಳು ಸಜೆ, ವಂಚನೆ ನಡೆಸಿದ್ದಕ್ಕೆ 3 ತಿಂಗಳು ಸದಾ ಶಿಕ್ಷೆ, ಬೆದರಿಕೆ ಹಾಕಿದ್ದಕ್ಕೆ 6 ತಿಂಗಳುಶಿಕ್ಷೆ ಹಾಗೂ 10 ಸಾವಿರ ದಂಡ, ಅದರಲ್ಲಿ 8 ಸಾವಿರ ಸಂತ್ರಸ್ತೆಗೆ ಪರಿಹಾರ ನೀಡಬೇಕು ಎಂದ ತೀರ್ಪಿನಲ್ಲಿ ಆದೇಶಿಸಲಾಗಿದೆ.
ನ್ಯಾಯಾಧೀಶರಾದ ಡಿ.ಟಿ.ಪುಟ್ಟರಂಗಸ್ವಾಮಿ ಅವರು ಪ್ರಕರಣದ ಪರ-ವಿರೋಧ ಸಾಕ್ಷಿ ವಿಚಾರಣೆ ನಡೆಸಿದ್ದರು. ಸರ್ಕಾರಿ ಅಭಿಯೋಜಕರಾದ ಜುಡಿತ್ ಒ.ಎಂ.ಕ್ರಾಸ್ತಾ ಸರ್ಕಾರದ ಪರವಾಗಿ ವಾದಿಸಿದ್ದರು.