×
Ad

ವನಿತೆಯರ ಏಕದಿನ ಸರಣಿ: ಶ್ರೀಲಂಕಾ ವಿರುದ್ಧ ಭಾರತಕ್ಕೆ 3-0 ಗೆಲುವು

Update: 2016-02-19 18:58 IST

ರಾಂಚಿ, ಫೆ.19: ಮಧ್ಯಮ ವೇಗದ ಬೌಲರ್ ದೀಪ್ತಿ ಶರ್ಮಾ ಹಾಗೂ ಅಗ್ರ ಕ್ರಮಾಂಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.
ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಮಣಿಸಿತು. ಈ ಗೆಲುವಿನ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿತು. ಮಾತ್ರವಲ್ಲ ಐಸಿಸಿ ಮಹಿಳೆಯರ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಏರಿತು.

ಎರಡನೆ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿ ಗಮನ ಸೆಳೆದಿದ್ದ ದೀಪ್ತಿ ಮೂರನೆ ಏಕದಿನದಲ್ಲಿ ಕೇವಲ 20 ರನ್ ನೀಡಿ ಆರು ವಿಕೆಟ್‌ಗಳನ್ನು ಉರುಳಿಸಿ ಲಂಕಾ ಆಟಗಾರ್ತಿಯರಿಗೆ ಸವಾಲಾದರು. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ಮೊದಲ ವಿಕೆಟ್‌ಗೆ 33 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. 7ನೆ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಎರಡು ವಿಕೆಟ್‌ಗಳನ್ನು ಉಡಾಯಿಸಿದ ದೀಪ್ತಿ ಶ್ರೀಲಂಕಾದ ಪತನಕ್ಕೆ ನಾಂದಿ ಹಾಡಿದರು.
  ನಾಯಕಿ ಶಶಿಕಲಾ ಸಿರಿವರ್ದನೆ ಹಾಗೂ ದಿಲಾನಿ ಮನೋದರಾ 6ನೆ ವಿಕೆಟ್‌ಗೆ 32 ರನ್ ಸೇರಿಸಿದರೂ ಶ್ರೀಲಂಕಾ 38.2 ಓವರ್‌ಗಳಲ್ಲಿ 112 ರನ್‌ಗೆ ಆಲೌಟಾಯಿತು. ಭಾರತದ ಪರ ದೀಪ್ತಿ ಹಾಗೂ ಚೊಚ್ಚಲ ಪಂದ್ಯ ಆಡಿದ್ದ ಪ್ರೀತಿ ಬೋಸ್(8-4-8-2) ಗಮನಾರ್ಹ ಪ್ರದರ್ಶನ ನೀಡಿದರು.
ಗೆಲುವಿಗೆ 113 ರನ್ ಸುಲಭ ಸವಾಲು ಪಡೆದಿದ್ದ ಭಾರತ 7.3 ಓವರ್‌ಗಳಲ್ಲಿ 18 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಪೂನಂ ರಾವತ್(0) ಇನಿಂಗ್ಸ್‌ನ 3ನೆ ಎಸೆತದಲ್ಲಿ ಔಟಾದರು. ಸ್ಮತಿ ಮಂಧಾನ ಕೇವಲ 6 ರನ್‌ಗೆ ರನೌಟಾದರು.
  ಆಗ ಜೊತೆಯಾದ ವೇದಾ ಕೃಷ್ಣಮೂರ್ತಿ(ಔಟಾಗದೆ 61 ರನ್, 90 ಎಸೆತ, 8 ಬೌಂಡರಿ) ಹಾಗೂ ದೀಪ್ತಿ ಶರ್ಮ(28) 3ನೆ ವಿಕೆಟ್‌ಗೆ 109 ಎಸೆತಗಳಲ್ಲಿ 70 ರನ್ ಸೇರಿಸಿ ತಂಡವನ್ನು ಆಧರಿಸಿದರು. ಔಟಾಗದೆ ಉಳಿದ ವೇದಾ ಕೃಷ್ಣಮೂರ್ತಿ ಭಾರತ ತಂಡ ಇನ್ನೂ 123 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಲು ನೆರವಾದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 38.2 ಓವರ್‌ಗಳಲ್ಲಿ 112 ರನ್‌ಗೆ ಆಲೌಟ್
(ಸುರಂಗಿಕಾ 23, ವೀರಕ್ಕೊಡಿ 19, ಕರುಣರತ್ನೆ 17, ದೀಪ್ತಿ ಶರ್ಮ 6-20, ಪ್ರೀತಿ ಬೋಸ್ 2-8, ಶಿಖಾ ಪಾಂಡೆ 2-24)
ಭಾರತ: 29.3 ಓವರ್‌ಗಳಲ್ಲಿ 114/3
 (ವೇದಾ ಕೃಷ್ಣಮೂರ್ತಿ ಔಟಾಗದೆ 61, ದೀಪ್ತಿ ಶರ್ಮ 28, ಕುಮಾರಿ 1-18, ಸಿರಿವರ್ಧನೆ 1-26)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News