ರಾಷ್ಟ್ರಪತಿ ಭವನದಲ್ಲಿ ಕೀಬೋರ್ಡ್ ನುಡಿಸಿದ ರೂಪಿತ್ ಡಿಸೋಜ

Update: 2016-02-19 15:11 GMT

ಮಂಗಳೂರು,ಫೆ.19: ನಗರದ ಬಾವುಟ ಗುಡ್ಡೆಯಲ್ಲಿರುವ ಸೈಂಟ್ ಅಲೋಶಿಯಸ್ ಪ್ರೌಢಶಾಲೆಯ ವಿದ್ಯಾರ್ಥಿ, ವಾಯುದಳ ಎನ್‌ಸಿಸಿ ಕೆಡೆಟ್ ರೂಪಿತ್ ಡಿಸೋಜ ಅವರು ದಿಲ್ಲಿಯಲ್ಲಿ ನಡೆದ ಗಣರಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಪರೇಡ್‌ನಲ್ಲಿ ಮಾತ್ರವಲ್ಲದೆ ಮರುದಿನ ದಿಲ್ಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀಬೋರ್ಡ್ ನುಡಿಸುವ ಅವಕಾಶವನ್ನು ಕೂಡಾ ಪಡೆದಿದ್ದೆ ಎಂದರು. 2015-16ನೇ ಶೈಕ್ಷಣಿಕ ಸಾಲಿನಲ್ಲಿ ಆಗಸ್ಟ್‌ನಲ್ಲಿ ಮೂಡುಬಿದಿರೆಯಲ್ಲಿ ನಡೆದ ಎನ್‌ಸಿಸಿ ವಾರ್ಷಿಕ ಶಿಬಿರದಿಂದ ಪ್ರಾರಂಭಗೊಂಡು, ಬ್ರಹ್ಮಾವರ, ಮೂಡುಬಿದಿರೆ, ಮೈಸೂರು, ಬೆಂಗಳೂರಿನಲ್ಲಿ ನಡೆದ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡು ಅಂತಿಮವಾಗಿ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ತಾನು ಆಯ್ಕೆಯಾದೆ ಎಂದು ಅವರು ವಿವರಿಸಿದರು.

ವಾಯುದಳ ಕಿರಿಯರ ವಿಭಾಗದಿಂದ ಕರ್ನಾಟಕ- ಗೋವಾ ನಿರ್ದೇಶಾನಾಲಯದಿಂದ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿ ತಾನಾಗಿದ್ದು, ಅತ್ಯುತ್ತಮ ಏರ್ ಕೆಡೆಟ್ ಪುರಸ್ಕಾರವನ್ನೂ ಪಡೆದಿದ್ದೇನೆ ಎಂದು ಅವರು ತಿಳಿಸಿದರು.

ದಿಲ್ಲಿಯಲ್ಲಿ ಕೀಬೋರ್ಡ್ ನುಡಿಸುವ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೂಲಕ ವಾಯುಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರೂಪ್ ಹಾಗು ನೌಕಾ ಸೇನೆ ಮುಖ್ಯಸ್ಥ ಅಡ್ಮಿರಲ್ ಆರ್.ಕೆ.ಧವನ್ ಅವರ ನಿವಾಸದಲ್ಲಿ ಕೀಬೋರ್ಡ್ ನುಡಿಸುವ ಅವಕಾಶ ತಾನು ಪಡೆದೆ ಎಂದು ಅವರು ವಿವರಿಸಿದರು.

ರೂಪಿತ್ ಅವರು ಲಂಡನ್ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ನಡೆಸುವ ಕೀಬೋರ್ಡ್ 6ನೇ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ 400 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮುಖ್ಯೋಪಾಧ್ಯಾಯ ರೆ.ಫಾ.ಎಡ್ವರ್ಡ್ ರೋಡ್ರಿಗಸ್, ರೂಪಿತ್ ಅವರ ತಾಯಿ ಪ್ರೀತಿ ಡಿಸೋಜ, ಎನ್‌ಸಿಸಿ ಅಧುಕಾರಿ ಸುನಿಲ್ ರೋಹನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News