ಟ್ರಂಪ್ ಕ್ರೈಸ್ತನಲ್ಲ: ಪೋಪ್

Update: 2016-02-19 15:11 GMT

ವ್ಯಾಟಿಕನ್ ಸಿಟಿ, ಫೆ. 19: ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ತನ್ನನ್ನು ಕ್ರೈಸ್ತ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಪೋಪ್ ಫ್ರಾನ್ಸಿಸ್ ಗುರುವಾರ ಹೇಳಿದ್ದಾರೆ.

ವಲಸಿಗರನ್ನು ದೂರವಿಡುವುದಕ್ಕಾಗಿ ಗಡಿಯಲ್ಲಿ ಗೋಡೆ ಕಟ್ಟುವುದಾಗಿ ಟ್ರಂಪ್ ಹೇಳಿದ ಬಳಿಕ ಪೋಪ್ ಈ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

‘‘ಯಾರೆ ಆಗಿರಲಿ, ಸೇತುವೆಗಳನ್ನು ನಿರ್ಮಿಸದೆ ಗೋಡೆಗಳನ್ನು ಮಾತ್ರ ಕಟ್ಟಲು ಬಯಸುವವರು ಕ್ರೈಸ್ತನಾಗಿರಲು ಸಾಧ್ಯವಿಲ್ಲ’’ ಎಂದು ಮೆಕ್ಸಿಕೊ ಪ್ರವಾಸ ಮುಗಿಸಿ ಮನೆಗೆ ಮರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್ ಹೇಳಿದರು.

‘‘ಮತ ಹಾಕಿ, ಹಾಕದೇ ಇರಿ. ನಾನೇನೂ ಹೇಳುವುದಿಲ್ಲ. ಆದರೆ, ನಾನು ಹೇಳುವುದು ಇಷ್ಟೇ- ಆ ಮನುಷ್ಯ ಈ ಮಾತುಗಳನ್ನು ಹೇಳುವುದಾದರೆ ಅವರು ಕ್ರೈಸ್ತರಲ್ಲ’’ ಎಂದರು.

ಮೆಕ್ಸಿಕೊ ಅಮೆರಿಕಕ್ಕೆ ಕ್ರಿಮಿನಲ್‌ಗಳು ಮತ್ತು ಅತ್ಯಾಚಾರಿಗಳನ್ನು ಕಳುಹಿಸುತ್ತಿದೆ ಎಂದು ಹೇಳುವ ಮೂಲಕ ಟ್ರಂಪ್ ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿದ್ದರು. ಮೆಕ್ಸಿಕೊ ಸರಕಾರದ ಬೇಡಿಕೆಯಂತೆ ಪೋಪ್ ಉಭಯ ದೇಶಗಳ ಗಡಿಗೆ ಭೇಟಿ ಕೊಡುತ್ತಿದ್ದಾರೆ ಎಂಬುದಾಗಿ ಕಳೆದ ವಾರ ಟ್ರಂಪ್ ಆರೋಪಿಸಿದ್ದರು.

‘‘ನಾನು ಮೆಕ್ಸಿಕೊ ಸರಕಾರದ ಕೈಗೊಂಬೆಯೇ? ಇದನ್ನು ನಾನು ನಿಮ್ಮ ಮತ್ತು ಜನರ ವಿವೇಚನೆಗೆ ಬಿಡುತ್ತೇನೆ’’ ಎಂದು ಫ್ರಾನ್ಸಿಸ್ ಹೇಳಿದರು.

ಮೆಕ್ಸಿಕೊ ಗಡಿಯಲ್ಲಿ ಗೋಡೆಯೊಂದನ್ನು ಕಟ್ಟುವ ಮೂಲಕ ಅಕ್ರಮ ವಲಸೆಯನ್ನು ತಡೆಯುವುದಾಗಿ ಟ್ರಂಪ್ ಭರವಸೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಅವಮಾನಕರ: ಟ್ರಂಪ್

 ಪೋಪ್ ಫ್ರಾನ್ಸಿಸ್‌ರ ಟೀಕೆಗೆ ಆಕ್ರೋಶಭರಿತರಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಪೋಪ್‌ರ ಹೇಳಿಕೆಗಳು ‘‘ಅವಮಾನಕರ’’ ಎಂದು ಬಣ್ಣಿಸಿದರು.

‘‘ಓರ್ವ ವ್ಯಕ್ತಿಯ ಧಾರ್ಮಿಕತೆಯನ್ನು ಧಾರ್ಮಿಕ ನಾಯಕರೊಬ್ಬರು ಪ್ರಶ್ನಿಸುವುದು ಅವಮಾನಕರ. ಕ್ರೈಸ್ತನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಕ್ರೈಸ್ತ ಧರ್ಮ ನಿರಂತರ ದಾಳಿಗೊಳಗಾಗಲು ಹಾಗೂ ದುರ್ಬಲಗೊಳ್ಳಲು ಅಮೆರಿಕದ ಅಧ್ಯಕ್ಷನಾಗಿ ನಾನು ಬಿಡುವುದಿಲ್ಲ. ಆದರೆ, ನಮ್ಮ ಈಗಿನ ಅಧ್ಯಕ್ಷರ ಅವಧಿಯಲ್ಲಿ ಕ್ರೈಸ್ತ ಧರ್ಮದ ಮೇಲೆ ದಾಳಿಯಾಗುತ್ತಿದೆ’’ ಎಂದು ಟ್ರಂಪ್ ಹೇಳಿದರು.

ಆದರೆ, ಬಳಿಕ ಮೃದು ಧೋರಣೆ ತಳೆದ ಟ್ರಂಪ್, ‘‘ನಾನು ಪೋಪ್ ಜೊತೆ ಜಗಳ ಮಾಡಲು ಬಯಸುವುದಿಲ್ಲ. ಇದೊಂದು ಜಗಳ ಎಂದು ನಾನು ಭಾವಿಸುವುದಿಲ್ಲ. ಮಾಧ್ಯಮದಲ್ಲಿ ವರದಿಯಾಗಿರುವುದಕ್ಕಿಂತಲೂ ಮೃದು ವಿಚಾರವನ್ನು ಅವರು ಹೇಳಿದ್ದಾರೆ ಎಂದು ನನಗನಿಸುತ್ತದೆ. ಅವರು ಈ ವಿಷಯದಲ್ಲಿ ಒಂದು ಕಡೆಯ ಕತೆಯನ್ನು ಮಾತ್ರ ಕೇಳಿದ್ದಾರೆ. ಬಹುರ್ಷ ಮೆಕ್ಸಿಕೊ ಸರಕಾರ ಅವರ ಕಿವಿಯೂದಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News