ಝಿಕಾ ಸೋಂಕಿತ ಮಹಿಳೆಯರು ಗರ್ಭನಿರೋಧಕ ಬಳಸಬಹುದು: ಪೋಪ್

Update: 2016-02-19 18:34 GMT
ಮೆಕ್ಸಿಕೊದಿಂದ ರೋಮ್‌ಗೆ ಮರಳುವ ವೇಳೆ ಪೋಪ್ ಫ್ರಾನ್ಸಿಸ್ ಬುಧವಾರ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿರುವುದು.

ವಿಶೇಷ ಪೋಪ್ ವಿಮಾನದಲ್ಲಿ, ಫೆ. 19: ಝಿಕಾ ವೈರಸ್ ಸೋಂಕಿನ ಭೀತಿಗೆ ಒಳಗಾಗಿರುವ ಮಹಿಳೆಯರು ಕೃತಕ ಗರ್ಭನಿರೋಧಕಗಳನ್ನು ಬಳಸಬಹುದು ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಜಾಗತಿಕ ಝಿಕಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ, ಗರ್ಭಧಾರಣೆಯನ್ನು ತಡೆಯುವುದು ಮಾಹಾಪಾಪವೇನಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ಸೋಂಕಿಗೊಳಗಾದವರು ಗರ್ಭಪಾತ ಮಾಡುವ ಪ್ರಸ್ತಾಪವನ್ನು ಪೋಪ್ ಖಡಾಖಂಡಿತವಾಗಿ ತಿರಸ್ಕರಿಸಿದರು.

ಮೆಕ್ಸಿಕೊಗೆ ನೀಡಿದ ಐದು ದಿನಗಳ ಪ್ರವಾಸದ ಬಳಿಕ ಸ್ವಸ್ಥಾನಕ್ಕೆ ಮರಳುತ್ತಿದ್ದ ವೇಳೆ ಗುರುವಾರ ಅವರು ತನ್ನ ವಿಮಾನದಲ್ಲಿ ಪತ್ರಕರ್ತರೊಂದಿಗೆ ತನ್ನ ನಿಲುವನ್ನು ಹಂಚಿಕೊಂಡರು.

‘‘ಗರ್ಭಪಾತವೆನ್ನುವುದು ಸ್ವತಃ ಪಾಪವಾಗಿದೆ. ಅದು ಧಾರ್ಮಿಕವಾಗಿ ಮಾತ್ರ ಪಾಪವಲ್ಲ, ಮಾನವೀಯ ಪಾಪವೂ ಆಗಿದೆ’’ ಎಂದು ಪೋಪ್ ಹೇಳಿದರು.

‘‘ಅದೇ ವೇಳೆ, ಗರ್ಭಧಾರಣೆಯನ್ನು ತಡೆಯುವುದು ಮಹಾಪಾಪವೇನಲ್ಲ. ಝಿಕಾ ವೈರಸ್ ಸೋಂಕಿನಂಥ ನಿರ್ದಿಷ್ಟ ಪ್ರಕರಣಗಳಲ್ಲಿ ಹೀಗೆ ಮಾಡಬಹುದಾಗಿದೆ’’ ಎಂದರು.

ಇದಕ್ಕೆ ಪೋಪ್ ಪೂರ್ವ ನಿದರ್ಶನವೊಂದನ್ನು ನೀಡಿದರು. 1960ರ ದಶಕದಲ್ಲಿ, ವ್ಯವಸ್ಥಿತ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಬೆಲ್ಜಿಯನ್ ಕಾಂಗೊದ ನನ್‌ಗಳು ಗರ್ಭ ಧರಿಸುವುದನ್ನು ತಡೆಯಲು ಅವರಿಗೆ ಕೃತಕ ಗರ್ಭನಿರೋಧಕಗಳನ್ನು ಒದಗಿಸುವುದಕ್ಕೆ ಆಗಿನ ಪೋಪ್ ಆರನೆ ಪೌಲ್ ಅನುಮತಿ ನೀಡಿರುವುದನ್ನು ಪೋಪ್ ಉಲ್ಲೇಖಿಸಿದರು.

ಝಿಕಾ ಸೋಂಕಿಗೊಳಗಾದ ಗರ್ಭಿಣಿಯರು ಸಣ್ಣ ತಲೆ ಹಾಗೂ ಮೆದುಳಿನ ಮಕ್ಕಳಿಗೆ ಜನ್ಮ ನೀಡಿರುವುದು ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News