ಕೊಹ್ಲಿಯ ಪಾಕ್ ಅಭಿಮಾನಿಗೆ ಜಾಮೀನು ನಿರಾಕರಣೆ
ಲಾಹೋರ್, ಫೆ. 19: ಪೊಲೀಸರು ಕ್ಲೀನ್‌ಚಿಟ್ ನೀಡಿರುವ ಹೊರತಾಗಿಯೂ, ಕ್ರಿಕೆಟಿಗ ವಿರಾಟ್ ಕೊಹ್ಲಿಯ ಕಟ್ಟಾ ಪಾಕಿಸ್ತಾನಿ ಅಭಿಮಾನಿಗೆ ಜಾಮೀನು ನೀಡಲು ಪಾಕಿಸ್ತಾನದ ನ್ಯಾಯಾಲಯವೊಂದು ನಿರಾಕರಿಸಿದೆ.
ಪಾಕಿಸ್ತಾನದ ಪಂಜಾಬ್ ರಾಜ್ಯದ ಒಕಾರ ಜಿಲ್ಲೆಯ ನಿವಾಸಿ 22 ವರ್ಷದ ಉಮರ್ ಡ್ರಾಝ್‌ರನ್ನು, ತನ್ನ ಮನೆಯ ಮೇಲ್ಛಾವಣಿಯಲ್ಲಿ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸಿದ ಆರೋಪದಲ್ಲಿ ಬಂಧಿಸಲಾಗಿತ್ತು. ಅಪರಾಧ ಸಾಬೀತಾದರೆ ಅವರು 10 ವರ್ಷಗಳ ಸೆರೆಮನೆ ವಾಸವನ್ನು ಎದುರಿಸುತ್ತಿದ್ದಾರೆ.
ಜಿಲ್ಲಾ ನ್ಯಾಯಾಧೀಶ ಆನಿಕ್ ಅನ್ವರ್ ಗುರುವಾರ ಜಾಮೀನು ನಿರಾಕರಿಸಿ ತೀರ್ಪು ನೀಡಿದರು.
‘‘ತೀರ್ಪಿನಿಂದ ನಮಗೆ ನಿರಾಶೆಯಾಗಿದೆ ಹಾಗೂ ಇದನ್ನು ಸೆಶನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ’’ ಎಂದು ಡ್ರಾಝ್ ಪರ ವಕೀಲ ಆಮಿರ್ ಭಟ್ಟಿ ಹೇಳಿದರು.
ಡ್ರಾಝ್ ‘‘ದೇಶದ್ರೋಹ’’ ನಡೆಸಿದ್ದಾರೆ ಎನ್ನುವುದನ್ನು ತೋರಿಸುವ ಪುರಾವೆ ಪತ್ತೆಯಾಗಿಲ್ಲ ಎಂಬುದಾಗಿ ತನ್ನ ವರದಿಯಲ್ಲಿ ತಿಳಿಸಿದ್ದೇನೆ ಎಂದು ಪೊಲೀಸ್ ಅಧಿಕಾರಿ ಅಝೀಝ್ ಚೀಮಾ ಸುದ್ದಿಗಾರರಿಗೆ ತಿಳಿಸಿದರು.
ವೃತ್ತಿಯಲ್ಲಿ ದರ್ಜಿಯಾಗಿರುವ ಡ್ರಾಝ್‌ರನ್ನು ಲಾಹೋರ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಅವರ ಊರಿನಲ್ಲಿ ಜನವರಿ 25ರಂದು ಬಂಧಿಸಲಾಗಿತ್ತು.
ಪರಿಣಾಮಗಳ ಅರಿವಿಲ್ಲದೆ ಮಾಡಿದ ತಪ್ಪು: ವಕೀಲ
ಪರಿಣಾಮಗಳ ಅರಿವಿಲ್ಲದೆ ಡ್ರಾಝ್ ತಪ್ಪು ಮಾಡಿದ್ದಾರೆ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ಹೇಳಿದರು.
‘‘ಯಾವುದೋ ದೇಶದ ಮೇಲಿನ ಪ್ರೀತಿಯಿಂದ ಆ ದೇಶದ ರಾಷ್ಟ್ರಧ್ವಜವನ್ನು ಹಾರಿಸಿದ ಪ್ರಕರಣ ಇದಲ್ಲ. ಫುಟ್ಬಾಲ್ ವಿಶ್ವಕಪ್ ವೇಳೆ ಇಲ್ಲಿನ ಜನರು ಬ್ರೆಝಿಲ್, ಅಜೇಂಟೀನ ಮುಂತಾದ ದೇಶಗಳ ಧ್ವಜಗಳನ್ನು ಹಾರಿಸಿದ್ದಾರೆ. ಆದರೆ, ಯಾರೊಬ್ಬರೂ ಅದಕ್ಕೆ ಆಕ್ಷೇಪಿಸಿಲ್ಲ. ಯಾಕೆಂದರೆ ಅದನ್ನು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಳ್ಳಲಾಗಿತ್ತು. ಇದು ಕೂಡ ಅಂಥದೇ ಪ್ರಕರಣವಾಗಿದೆ’’ ಡ್ರಾಝ್ ಪರ ವಕೀಲರು ವಾದಿಸಿದರು.