ಇಟಾಲಿಯನ್ ಖಾದ್ಯಗಳ ಪರಿಚಯ! - ಅಲೋಶಿಯಸ್ ಕಾಲೇಜಿನಲ್ಲೊಂದು ವಿನೂತನ ಕಾರ್ಯಾಗಾರ

Update: 2016-02-19 15:26 GMT

ಮಂಗಳೂರು, ಫೆ. 19: ಸಂತ ಅಲೋಶಿಯಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಇಂದು ಸಾರ್ವಜನಿಕರಿಗಾಗಿ ಇಟಾಲಿಯನ್ ಖಾದ್ಯಗಳ ಪರಿಚಯ ನೀಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಅಲ್ಬರ್ಟೋ ಪೆಸಾನಿ ಮತ್ತು ಸಿಲ್ವಾನಾ ರಿಝಿ ದಂಪತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಆಯ್ದ ಸುಮಾರು 15 ಮಂದಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನ ಆಹಾರ ಸಂಸ್ಕರಣಾ ಘಟಕದಲ್ಲಿ ಪಾಸ್ತಾ ಒರ್ಚಿಟ್ಟೆ, ಪಾಸ್ತಾ ವಿದ್ ಪೆಸ್ತೋ ಸಾಸ್, ಕಾಕ್‌ಟೇಲ್ ಮಿಲಾನೆಸೆ ಮತು ಆ್ಯಪಲ್ ಕೇಕ್ ಮೊದಲಾದ ಇಟಾಲಿಯನ್ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಬಳಿಕ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶವನ್ನು ಕಲ್ಪಿಸಲಾಯಿತು.

ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಆರಂಭಗೊಂಡ ಮೂರು ವರ್ಷಗಳಲ್ಲಿ ಈಗಾಗಲೇ ಇಂತಹ ಎಂಟು ಅಂತಾರಾಷ್ಟ್ರೀಯ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದ್ದು, ಇಟೆಲಿ ಖಾದ್ಯಗಳ ಬಗೆಗಿನ 3ನೆ ಕಾರ್ಯಾಗಾರ ಇದಾಗಿದೆ. ಈವರೆಗಿನ ಕಾರ್ಯಾಗಾರಗಳು ಕೇವಲ ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದ್ದು, ಇದೇ ಮೊದಲ ಬಾರಿಗೆ ಆಯ್ದ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗದ ಸಂಯೋಜಕರಾದ ಡಾ. ಮೆಲ್ವಿನ್ ಡಿಕುನ್ನಾ ಎಸ್.ಜೆ. ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದರು. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಸುಸಜ್ಜಿತ ಆಹಾರ ಸಂಸ್ಕರಣಾ ಘಟಕವನ್ನು ಹೊಂದಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಸಂಸ್ಕರಣೆ, ಪ್ಯಾಕಿಂಗ್, ಬಾಟಲಿಂಗ್‌ಗಳ ಮೂಲಕ ಶೇಖರಣೆ ಮಾಡುವ ವಿಧಾನವನ್ನು ತಾಂತ್ರಿಕವಾಗಿ ಕಲಿಸಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವಾ ಅವರು ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News