12 ವರ್ಷ ಬಳಿಕ ನಾಸಿಕದಿಂದ ಆಗಮಿಸಿದ ನಾಥಪಂಥದ ಝಂಡಿಯಾತ್ರೆ
ಸಿದ್ಧಾಪುರ, ಫೆ.19: 12 ವರ್ಷಗಳಿಗೊಮ್ಮೆ ನಾಸಿಕದ ತ್ರಯ್ಯಬಂಕೇಶ್ವರದಿಂದ ಪಾದಯಾತ್ರೆಯಲ್ಲಿ ಹೊರಟು 1750 ಕಿ.ಮೀ. ದೂರವನ್ನು ಕ್ರಮಿಸಿ ಮಂಗಳೂರಿನ ಕದ್ರಿ ಕಾಲಭೈರವ ಯೋಗೇಶ್ವರ ಮಠಕ್ಕೆ (ಕದ್ರಿ ಜೋಗಿ ಮಠ) ಬರುವ ಮಾರ್ಗದಲ್ಲಿ 522 ನಾಥಪಂಥದ ಯೋಗಿಗಳ ನವನಾಠ ಝುಂಡಿ ಯಾತ್ರೆ ಗುರುವಾರ ಸಂಜೆ ಯಡಮೊಗೆಯ ಶ್ರೀಸಿದ್ಧಪೀಠ ಕೊಡಚಾದ್ರಿ ಹಲವರಿ ಮಠಕ್ಕೆ ಆಗಮಿಸಿದ್ದು, ಇಂದು ಮಠದ ನೂತನ ಗುರುಗಳನ್ನು ಆಯ್ಕೆ ಮಾಡಿ ಅವರ ಪೀಠಾರೋಹಣ ನೆರವೇರಿಸಿದರು.
ಪ್ರತಿ 12 ವರ್ಷಗಳಿಗೊಮ್ಮೆ ಹೀಗೆ ಪಾದಯಾತ್ರೆಯಲ್ಲಿ ಸಾಗಿಬರುವ ಝುಂಡಿ ಯಾತ್ರೆಯ ಪ್ರಮುಖ ಯೋಗಿಗಳು ಸೇರಿ ಈ ಮಠಕ್ಕೆ ನೂತನ ಗುರುವನ್ನು ಆಯ್ಕೆ ಮಾಡುತ್ತಾರೆ. ಇಂದು ಇವರು ಮಧ್ಯಪ್ರದೇಶದ ಗ್ವಾಲಿಯರ್ ಮಠದ ಶ್ರೀಯೋಗಿ ಜಗದೀಶನಾಥ ಗುರೂಜಿ ಅವರನ್ನು ಹಲವರಿ ಜೋಗಿ ಮಠದ ನೂತನ ಪೀಠಾಧಿಪತಿಯಾಗಿ ಆಯ್ಕೆ ಮಾಡಿದ ಬಳಿಕ ಅವರಿಗೆ ಸಂಪ್ರದಾಯದಂತೆ ಪೀಠಾರೋಹಣ ನೆರವೇರಿಸಿದರು. ಇವರು ಇನ್ನು 12 ವರ್ಷಗಳ ಕಾಲ ಮಠದಲ್ಲಿ ವಾಸ್ತವ್ಯದಲ್ಲಿರುತ್ತಾರೆ.
45 ವರ್ಷ ಪ್ರಾಯದ ಯೋಗಿ ಜಗದೀಶನಾಥ ಗುರೂಜಿ ಅವರು ಸಣ್ಣ ಪ್ರಾಯದಲ್ಲೇ ಗ್ವಾಲಿಯರ್ ಮಠದ ದಿ.ಯೋಗಿ ಸೋಮನಾಥ ಗುರೂಜಿ ಅವರ ಶಿಷ್ಯತ್ವ ಸ್ವೀಕರಿಸಿದ್ದರು. ಕಳೆದ ವರ್ಷ ಗುರೂಜಿ ನಿಧನರಾದ ಬಳಿಕ ಅವರು ಅಲ್ಲಿ ಕಾರ್ಯನಿರ್ವಹಿಸುತಿದ್ದರು. ಇದೀಗ ಅವರನ್ನು ಹಲವರಿ ಮಠದ ಉಸ್ತುವಾರಿ ವಹಿಸುವರು.
ನಾಥಪಂಥದ ಪರಂಪರೆ, ಅವರ ವಿಶೇಷತೆಗಳನ್ನು ಮಠಕ್ಕೆ ಭೇಟಿ ನೀಡಿದ ಪತ್ರಕರ್ತರಿಗೆ ವಿವರಿಸಿದ ಝಂಡಾ ಯಾತ್ರೆಯ ಮುಖ್ಯಸ್ಥ ಮಹಂತ ಯೋಗಿ ಸೂರಜ್‌ನಾಥ್, ಗುರು ಶ್ರೀಮತ್ಸೇಂದ್ರನಾಥರಿಂದ ಪ್ರವರ್ಧಮಾನಕ್ಕೆ ಬಂದ ನಾಥ ಪಂಥವು ಗುರು ಶ್ರೀಗೋರಕ್ಷಕನಾಥರ ಕಾಲದಲ್ಲಿ ಹೆಚ್ಚಿನ ಜನಮನ್ನಣೆ ಪಡೆಯಿತು. ಆಗ ಅದು ಭಾರತವಲ್ಲದೇ ನೇಪಾಳ, ಅಪಘಾನಿಸ್ತಾನದವರೆಗೂ ತನ್ನ ಪ್ರಭಾವವನ್ನು ವಿಸ್ತರಿಸಿತ್ತು ಎಂದರು.
12 ವರ್ಷಗಳಿಗೊಮ್ಮೆ ನಾಸಿಕದ ತ್ರಯಂಭಕೇಶ್ವರ ಕುಂಭಮೇಳದ ವೇಳೆ ನಾಥ ಯೋಗಿಗಳು ಸಭೆ ಸೇರಿ ದಕ್ಷಿಣ ಭಾರತದ ಅತಿ ಪ್ರಮುಖ ನಾಥ ಕೇಂದ್ರವಾಗಿರುವ ಮಂಗಳೂರಿನ ಕದ್ರಿ ಜೋಗಿ ಮಠದ ಪೀಠಾಧಿಪತಿಯ ಆಯ್ಕೆಯ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಬಾರಿ ರಾಜಸ್ತಾನದ ಜಾಲ್ಸೂರು ಜಿಲ್ಲೆಯ ಶ್ರೀನಿರ್ಮಲನಾಥ್ ಗುರೂಜಿ ಅವರನ್ನು ಕದ್ರಿ ಜೋಗಿ ಮಠದ ಪೀಠಾಧಿಪತಿಯಾಗಿ ಆಯ್ಕೆ ಮಾಡಿದ್ದು, ಅವರಿಗೆ ಮುಂದಿನ ಶಿವರಾತ್ರಿಯ ದಿನದಂದು (ಮಾ.7) ವಿಜೃಂಭಣೆಯಿಂದ ಪಟ್ಟಾಭಿಷೇಕ ನಡೆಯಲಿದೆ. ಮಂಗಳೂರು ಕದಳಿ (ಕದ್ರಿ) ಯೋಗೇಶ್ವರ ಮಠದ ಪೀಠಾಧಿಪತಿಯನ್ನು ರಾಜಾ ಅಥವಾ ಅರಸು (ಮಹಾರಾಜ್) ಎಂದು ಕರೆಯಲಾಗುತ್ತದೆ ಎಂದವರು ವಿವರಿಸಿದರು.
ಆ ಬಳಿಕ ನಾಥ ಯೋಗಿಗಳು ನಾಗರ ಪಂಚಮಿಯ (2015ರ ಆಗಸ್ಟ್ 19ರಂದು) ದಿನದಂದು ಅಲ್ಲಿಂದ ಝಂಡಿ ಯಾತ್ರೆ ಹೊರಡುತ್ತಾರೆ. ಕದ್ರಿ ಜೋಗಿ ಮಠದ ಪೀಠಾಧಿಪತಿಯಾಗಿ ಆಯ್ಕೆಯಾದ ಯೋಗಿಯು ಅವರಿಗೆ ಪರಶುರಾಮನಿಂದ ನೀಡಲ್ಪಟ್ಟದೆಂದು ನಂಬುವ ‘ಪಾತ್ರ ದೇವತೆ’ಯನ್ನು ಹಿಡಿದು ಮುಂಚೂಣಿಯಲ್ಲಿ ಬರುತ್ತಾರೆ. ಹಿಂದಿನಿಂದ ಮಹಂತರು, ಪಂಚರು, ಕೊಠಾರಿಗಳು ಹಾಗೂ ವಕ್ತಾರರು (ಎಲ್ಲರೂ ಯೋಗಿಗಳು) ಇರುತ್ತಾರೆ. ಸುಮಾರು 500ಕ್ಕಿಂತ ಅಧಿಕ ಯೋಗಿಗಳಿರುವ ಈ ಝಂಡಿ ಯಾತ್ರೆ 1750 ಕಿ.ಮೀ.ದೂರವನ್ನು ಕಾಲ್ನಡಿಗೆ ಯಲ್ಲೇ ಕ್ರಮಿಸಿ ಕದ್ರಿಗೆ ಇದೇ ಫೆ.26ರಂದು ತಲುಪಲಿದೆ. ಅಲ್ಲಿ ನೂತನ ಪೀಠಾಧಿಪತಿಗೆ ಪಟ್ಟಾಭಿಷೇಕವಾದ ಬಳಿಕ ಅಲ್ಲಿಂದ ತಮ್ಮ ತಮ್ಮ ಮಠಗಳಿಗೆ ಇವರು ತೆರಳುತ್ತಾರೆ.
ತ್ರಯಂಭಕೇಶ್ವರಿಂದ ಹೊರಟ ಝಂಡಿ ಯಾತ್ರೆ ಕದ್ರಿ ತಲುಪುವವರೆಗೆ ಒಟ್ಟು 93 ಸ್ಥಳಗಳಲ್ಲಿ ಮೊಕ್ಕಾಂ ಹೂಡುತ್ತದೆ. ನಾಥ ಪಂಥದ ಒಟ್ಟು 17 ಮಠಗಳಲ್ಲಿ ನೂತನ ಪೀಠಾಧಿಪತಿಗಳ ಪೀಠಾರೋಹಣ ನೆರವೇರಿಸುತ್ತದೆ. ಕರ್ನಾಟಕದಲ್ಲಿ ಇಂಥ ಆರು ಮಠಗಳಿವೆ. ಹಲವರಿ ಬಳಿಕ, ವಿಟ್ಲದ ಯೋಗೀಶ್ವರ ಮಠಕ್ಕೂ ನೂತನ ಪೀಠಾಧಿಪತಿಗಳ ನೇಮಕವಾಗಬೇಕಿದೆ. ಚಂದ್ರಗುತ್ತಿ ಮಠಕ್ಕೆ ಹೊಸ ಪೀಠಾಧಿಪತಿಗಳನ್ನು ನೇಮಿಸಿ ಹೊಸನಗರದ ಮೂಲಕ ನಿನ್ನೆ ಈ ಯಾತ್ರೆ ಯಡಮೊಗೆಗೆ ಆಗಮಿಸಿದೆ. ನಾಳೆ ಇಲ್ಲಿಂದ ಹಾಲಾಡಿ, ಬಾರಕೂರು, ಉಡುಪಿ, ಮುಲ್ಕಿ, ಪಣಂಬೂರು ಮೂಲಕ ಮಂಗಳೂರಿನ ಕದ್ರಿಯಲ್ಲಿ ಝಂಡಿ ಕೊನೆಗೊಳ್ಳಲಿದೆ.
ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ, ಅವರನ್ನು ದೇಶದ ಸತ್ಪ್ರಜೆಗಳಾಗಿ ಮಾಡುವಂತೆ ಮಹಂತ ಯೋಗಿ ಸೂರಜ್‌ನಾಥ್ ದೇಶದ ಎಲ್ಲಾ ಹೆತ್ತವರಿಗೂ ಸಂದೇಶ ನೀಡಿದರು. ಹಲವರಿ ಜೋಗಿ ಮಠ ಟ್ರಸ್ಟ್‌ನ ಪದಾಧಿಕಾರಿಗಳಾದ ಕೇಶವ ಕೋಟೇಶ್ವರ, ಶೇಖರ ಬಳೆಗಾರ, ಶಿವರಾಮ ಬಳೆಗಾರ, ರಾಮನಾಥ ಬಳೆಗಾರ ರಮೇಶ್ ಜೋಗಿ ಮುಂತಾದವರು ಕಾರ್ಯಕ್ರಮಗಳನ್ನು ಸುಸೂತ್ರವಾಗಿ ಸಂಯೋಜಿಸಿದರು.
ಉತ್ತರ ಕನ್ನಡ, ಉಡುಪಿ ಹಾಗೂ ದ.ಕ.ಜಿಲ್ಲೆಗೆ ಸೇರಿದ ಮಠದ ನೂರಾರು ಮಂದಿ ಭಕ್ತರು ಮಠಕ್ಕೆ ಭೇಟಿ ನೀಡಿ ನವನಾಥ ಝಂಡಿ ಉತ್ಸವ ಹಾಗೂ ನೂತನ ಗುರುವಿನ ಪೀಠಾರೋಹಣವನ್ನು ವೀಕ್ಷಿಸಿದರು.
ಹಲವರಿ ಮಠಕ್ಕೆ 1100 ವರ್ಷಗಳಿಂದ ನಾಥ ಪಂಥದ ಝಂಡಿ ಯಾತ್ರೆ ಬರುತ್ತಿರುವ ಬಗ್ಗೆ ದಾಖಲೆಗಳಿವೆ. ಈವರೆಗೆ 83 ಝಂಡಿ ಯಾತ್ರೆಗಳು ಇಲ್ಲಿಗೆ ಬಂದಿದ್ದು, ಇದು 84ನೇ ಯಾತ್ರೆ ಎಂದು ಝಂಡಿ ನಿರ್ವಹಣಾ ಸಮಿತಿಯ ಅಧ್ಯಕ್ಷ ರಾಮನಾಥ ಬಳೆಗಾರ ತಿಳಿಸಿದರು.
ಉ.ಕ.ದ ಭಟ್ಕಳದಿಂದ ಹಿಡಿದು ಬ್ರಹ್ಮಾವರ ಸಮೀಪದ ಮಾಬುಕಳ ಸೀತಾನದಿವರೆಗಿನ ನಾಥಪಂಥದ ಜೋಗಿ, ಬಳೆಗಾರ, ಮರಾಠಿ ಜೋಗಿ, ಹಂಡಿ ಜೋಗಿ, ಕಣಬಿ ಜೋಗಿ ಮುಂತಾದ ಜನಾಂಗಕ್ಕೆ ಇದೇ ಮೂಲ ಮಠವಾಗಿದೆ.
ಸೀತಾನದಿಯಿಂದ ಮುಂದೆ ಕಾಸರಗೋಡಿನವರೆಗಿನವರಿಗೆ ಕದಳಿ (ಕದ್ರಿ) ಜೋಗಿ ಮಠ ಮೂಲ ಮಠವಾಗಿದೆ. ಕದ್ರಿ ಮಠಕ್ಕೆ ಮಾ.7ರಂದು ನೂತನ ಪೀಠಾಧಿಪತಿ ಯೋಗಿ ನಿರ್ಮಲನಾಥ ಗುರೂಜಿಗೆ ಪಟ್ಟಾಭಿಷೇಕವಾಗಲಿದೆ ಎಂದವರು ತಿಳಿಸಿದರು