×
Ad

ಯುಎಇಗೆ ಮಣಿದ ಅಫ್ಘಾನಿಸ್ತಾನ ಏಷ್ಯಾಕಪ್ ಟ್ವೆಂಟಿ-20 ಟೂರ್ನಿಯ ಅರ್ಹತಾ ಪಂದ್ಯ

Update: 2016-02-19 22:58 IST

ಫತಾವುಲ್ಲಾ, ಫೆ.19: ಇಲ್ಲಿ ನಡೆದ ಏಷ್ಯಾಕಪ್‌ನ ಮೊದಲ ಅರ್ಹತಾ ಪಂದ್ಯದಲ್ಲಿ ಇಂದು ಅಫ್ಘಾನಿಸ್ತಾನ ವಿರುದ್ಧ ಯುಎಇ 16 ರನ್‌ಗಳ ರೋಚಕ ಜಯ ದಾಖಲಿಸಿದೆ.

ಖಾನ್ ಸಾಹೇಬ್ ಉಸ್ಮಾನ್ ಅಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 177 ರನ್‌ಗಳ ಕಠಿಣ ಸವಾಲನ್ನು ಪಡೆದ ಅಫ್ಘಾನಿಸ್ತಾನ ತಂಡ 19.5 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟಾಯಿತು.

ರೋಹನ್ ಮುಸ್ತಫಾ (3-19) ಅವರು ಆಲ್‌ರೌಂಡ್ ಪ್ರದರ್ಶನ ನೀಡಿ ಯುಎಇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಹಮ್ಮದ್ ನವೀದ್(2-29), ಫರ್ಹಾನ್ ಅಹ್ಮದ್(2-28), ಅಮ್ಜದ್ ಜಾವೇದ್(1-26) ಮತ್ತು ಅಹ್ಮದ್ ರಝಾ(1-32) ಅಫ್ಘಾನಿಸ್ತಾನಕ್ಕೆ ಗೆಲುವು ನಿರಾಕರಿಸಿದರು.

  5.4 ಓವರ್‌ಗಳಲ್ಲಿ 37ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್‌ನ್ನು ಮುಂದುವರಿಸಿದ ಕರೀಮ್ ಸಾದಿಕ್ 72 ರನ್(71ನಿ, 48ಎ, 8ಬೌ,1ಸಿ) ಗಳಿಸಿ ತಂಡದ ಸ್ಕೋರ್ 144ಕ್ಕೆ ತಲುಪುವ ತನಕ ಕ್ರೀಸ್‌ನಲ್ಲಿ ನಿಂತರು. ಆದರೆ 19ನೆ ಓವರ್‌ನ ಮೊದಲ ಎಸೆತದಲ್ಲಿ ಅವರು ನವೀದ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ ಪರಿಣಾಮವಾಗಿ ಅಫ್ಘಾನಿಸ್ತಾನ ಒತ್ತಡಕ್ಕೆ ಸಿಲುಕಿತು. ಬಳಿಕ ಚೇತರಿಸಿಕೊಳ್ಳಲಿಲ್ಲ. ಸಾದಿಕ್ ನಾಲ್ಕನೆ ವಿಕೆಟ್‌ಗೆ ಅಸ್ಘರ್(23) ಜೊತೆ 47 ರನ್ ಮತ್ತು ಆರನೆ ವಿಕೆಟ್‌ಗೆ ನಜೀಬುಲ್ಲಾ ಝರ್ದಾನ್(21) ಜೊತೆ 41 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ದರು. ಆದರೆ 17.6ನೆ ಓವರ್‌ನಲ್ಲಿ ಝರ್ದಾನ್ ರನೌಟಾದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಸಾದಿಕ್ ಔಟಾದರು. ಯುಎಇ 176/4: ಯುನೈಟೆಡ್ ಅರಬ್ ಎಮಿರೆಟ್ಸ್ ತಂಡ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿತ್ತು. 87 ನಿಮಿಷಗಳ ಬ್ಯಾಟಿಂಗ್‌ನಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು. ಆರಂಭಿಕ ದಾಂಡಿಗ ರೋಹನ್ ಮುಸ್ತಫಾ 77 ರನ್(58ನಿ, 50ಎ, 7ಬೌ, 4ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮುಸ್ತಫಾ ಮತ್ತು ಮುಹಮ್ಮದ್ ಕಲೀಮ್ ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 83 ರನ್‌ಗಳ ಜೊತೆಯಾಟ ನೀಡಿದ್ದರು. ಕಲೀಮ್ 25 ರನ್, ಶೈಮನ್ ಅನ್ವರ್ 11ರನ್, ಉಸ್ಮಾನ್ ಮುಷ್ತಾಕ್ ಔಟಾಗದೆ 25 ರನ್ ಮತ್ತು ಮುಹಮ್ಮದ್ ಶಹಝಾದ್ ಔಟಾಗದೆ 25 ರನ್ ಗಳಿಸಿ ತಂಡದ ಸ್ಕೋರ್‌ನ್ನು 170ರ ಗಡಿ ದಾಟಿಸಲು ನೆರವಾದರು.

ಸಂಕ್ಷಿಪ್ತ ಸ್ಕೋರ್ ವಿವರ

 ಯುನೈಟೆಡ್ ಅರಬ್ ಎಮಿರೆಟ್ಸ್ 20 ಓವರ್‌ಗಳಲ್ಲಿ 176/4( ಮುಸ್ತಫಾ 77, ಕಲೀಮ್ 25, ಮುಷ್ತಾಕ್ ಔಟಾಗದೆ 25; ರಶೀದ್ ಖಾನ್ 3-25).

ಅಫ್ಘಾನಿಸ್ತಾನ 19.5 ಓವರ್‌ಗಳಲ್ಲಿ ಆಲೌಟ್ 160( ಕರೀಮ್ ಸಾದಿಕ್ 72, ನಬಿ 23; ಮುಸ್ತಫಾ 3-19).

ಪಂದ್ಯಶ್ರೇಷ್ಠ: ರೋಹನ್ ಮುಸ್ತಫಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News